ಮುಂಬಯಿ: ಹೊಟೇಲ್ ಉದ್ಯಮಿ, ಪ್ರಗತಿಪರ ಕೃಷಿಕ, ಧಾರ್ಮಿಕ ಮುಖಂಡ ಅಜೆಕಾರಿನ ಪಮ್ಮೊಟ್ಟು ಸುಂದರ ಶೆಟ್ಟಿ(76) ಹೃದಯಾಘಾತದಿಂದ ಮುಂಬಯಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ತನ್ನ ಕುಟುಂಬ ವರ್ಗದವರ ಜತೆ ಮುಂಬಯಿನ ವಜ್ರೇಶ್ವರಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡಾಗ ತಕ್ಷಣವೇ ಅವರನ್ನು ಆಸ್ಪತೆಗೆ ದಾಖಲಿಸುವ ಪ್ರಯತ್ನ ನಡೆಸಲಾಯಿತಾದರೂ ಅವರು ಚಿಕಿತ್ಸೆ ನೀಡುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪಮ್ಮೊಟ್ಟು ಸುಂದರ ಶೆಟ್ಟಿ ಮುಂಬಯಿಯಲ್ಲಿ ಕಳೆದ 50 ವರ್ಷಗಳಿಂದ ಹೋಟೇಲ್ ಉದ್ಯಮ ನಡೆಸುತ್ತಿದ್ದು, ಅಜೆಕಾರು ವಿಷ್ಣುಮೂರ್ತಿ ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಹಾಗೂ ವ್ಯವಸ್ಥಾಪನ ಸಮಿತಿಯಲ್ಲಿಯೂ ಕಾರ್ಯನಿರ್ವಹಿಸಿದ್ದರು. ಉದ್ಯಮ ಹಾಗೂ ಧಾರ್ಮಿಕ ಚಟುವಟಿಕೆಗಳ ನಡುವೆಯೂ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ಹುಟ್ಟೂರು ಅಜೆಕಾರಿನಲ್ಲಿ ಮೀನಾ ಬೋರ್ಡಿಂಗ್ ಹಾಗೂ ಲಾಡ್ಜಿಂಗ್ ಉದ್ಯಮದ ಜತೆಗೆ ಪ್ರಗತಿಪರ ಕೃಷಿಕರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.