Share this news

ಮುಂಬೈ : ಭಾರತೀಯ ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿಗಳು ಅಳಿವಿನಂಚಿನಲ್ಲಿ ಸಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ರಾಷ್ಟ್ರ ವ್ಯಾಪಿಯಾಗಿ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಪ್ರತಿಯೊಬ್ಬ ಪ್ರಜೆಯೂ ಕೈಗೊಂಡಾಗ ಖಂಡಿತ ಮುಂದಿನ ದಿನಗಳಲ್ಲಿ ನಮ್ಮ ನಮ್ಮ ಪೀಳಿಗೆಗಳು ಕೈ ಜೋಡಿಸಬಲ್ಲರು ಎಂದು ಮುಂಬಯಿ ವಿರಾರ್ ಶ್ರೀದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ ಇದರ ಅಧ್ಯಕ್ಷ ಇನ್ನಂಜೆ ಶಶಿಧರ್ ಶೆಟ್ಟಿ ಹೇಳಿದರು.

ಅವರು ವಿರಾರ್’ನ ರಿಜೆನ್ಸಿ ಬ್ಯಾಂಕ್ವಿಟ್ ಹಾಲ್ ನಾಲಾಸೋಪಾರ ಇಲ್ಲಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಮಹಾತ್ಮೆ ಯಕ್ಷಗಾನ ಮುಹೂರ್ತ,ಭರತನಾಟ್ಯ, ಕನ್ನಡ ಕಲಿಕೆ, ಪುಟ್ಬಾಲ್ ಮುಂತಾದ ತರಬೇತಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವ ವ್ಯಾಖ್ಯಾನದಂತೆ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳಿಗೆ ವೇದಿಕೆಗಳನ್ನು ಒದಗಿಸಿ ಕೊಟ್ಟಾಗ ಶಿಕ್ಷಣದೊಂದಿಗೆ ಸಾಮಾಜಿಕ ಬದ್ಧತೆ,ಧಾರ್ಮಿಕ ನಂಬಿಕೆ, ಆಧ್ಯಾತ್ಮಿಕ ಚಿಂತನೆ, ಆಚಾರ ವಿಚಾರಗಳ ಜ್ಞಾನ ವೃದ್ಧಿಯಾಗಲು ಅವಕಾಶವಾಗಬಹುದು ಎಂದರು.
ಸಂಸ್ಥೆಯ ಕಾರ್ಯದರ್ಶಿ ಕಣಂಜಾರು ಪ್ರವೀಣ್ ಶೆಟ್ಟಿ ಮಾತನಾಡಿ, ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥ ಪ್ರೀತಿ ಸಿಗುವುದು ಮನಪೂರ್ವಕವಾಗಿ ಕಲಿಯುವ ವಿವಿಧ ಕಲಿಕೆಗಳಿಂದ ಮಾತ್ರ, ವಿದ್ಯೆಗಳೊಂದಿಗೆ ವಿವಿಧ ಮನರಂಜನ ಹಾಗೂ ದೈಹಿಕ ಸದೃಢ ಕಲಿಕೆಗಳು ನಮ್ಮನ್ನು ಸುಸಂಸ್ಕೃತರನ್ನಾಗಿಸುತ್ತದೆ ಈ ಶಿಬಿರದ ಎಲ್ಲಾ ಕಲಿಕಾರ್ಥಿಗಳಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.

ಶಿಬಿರದಲ್ಲಿ ಸಂಸ್ಥೆಯ ಕೋಶಾಧಿಕಾರಿ ಜಗನ್ನಾಥ ಡಿ ಶೆಟ್ಟಿ, ಯಕ್ಷಗಾನ ತರಬೇತುದಾರ ನಾಗೇಶ್ ಪೊಳಲಿ, ಭರತನಾಟ್ಯ ತರಬೇತುದಾರೆ ಸ್ಮಿತಾ ನಾಯಕ್, ಭಜನಾ ತರಬೇತುದಾರೆ ಲೀಲಾವತಿ ಆಳ್ವ,ಫುಟ್ಬಾಲ್ ತರಬೇತುದಾರ ನಾಗೇಶ್ ಕೋಟ್ಯಾನ್,ಕನ್ನಡ ಕಲಿಕಾ ಗುರು ವಿಜಯ್ ಸಾಲ್ಯಾನ್ ಮತ್ತು ಮಲ್ಲಿಕಾ ಪೂಜಾರಿ ಉಪಸ್ಥಿತರಿದ್ದರು.
ಈ ಕಲಿಕಾ ಶಿಬಿರದಲ್ಲಿ 185 ಶಿಬಿರಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಎಲ್ಲಾ ಶಿಬಿರಾರ್ಥಿಗಳ ಪಾಲಕ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

                        

                          

                        

                          

 

Leave a Reply

Your email address will not be published. Required fields are marked *