ಕಾರ್ಕಳ: ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಕಾರ್ಕಳ ಪುರಸಭಾ ಆಡಳಿತವು ನೋಟಿಸ್ ನೀಡಿರುವ ಕ್ರಮ ಖಂಡನೀಯ, ನೀಡಿದ ನೋಟಿಸ್ ತಕ್ಷಣ ಹಿಂಪಡೆಯಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀ ವೆಂಕಟರಮಣ ದೇವರ ಉತ್ಸವಕ್ಕೆ ರಥಬೀದಿಯಲ್ಲಿ ಗುರ್ಜಿ ನಿರ್ಮಾಣ ಮಾಡುವುದು ತಲ ತಲಾಂತರಗಳಿಂದ ನಡೆದು ಬಂದಿದೆ. ಉತ್ಸವದ ನಂತರ ಗುರ್ಜಿ ತೆಗೆದು ಗುರ್ಜಿಯ ಹೊಂಡವನ್ನು ಪ್ರತೀ ವರ್ಷವೂ ತಕ್ಷಣ ಮುಚ್ಚುವ ಕೆಲಸ ಮಾಡಲಾಗುತ್ತದೆ, ಈ ವರ್ಷವೂ ಅದೇ ಆಗಿದೆ. ಇದೆಲ್ಲವೂ ಸರ್ವೆ ಸಾಮಾನ್ಯವಾದರೂ ಏನೂ ತಿಳಿಯದಂತೆ ಪುರಸಭಾ ಆಡಳಿತ ದೇವಸ್ಥಾನಕ್ಕೆ ನೋಟೀಸು ನೀಡಿರುವುದು ಆಶ್ಚರ್ಯ ತಂದಿದೆ ಎಂದಿದ್ದಾರೆ.
ನೋಟೀಸು ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿ ತಕ್ಷಣ ವರ್ಗಾವಣೆ ಮಾಡಬೇಕು, ನೀಡಿದ ನೋಟೀಸ್ ಹಿಂಪಡೆದು ದೇವರಲ್ಲಿ ಕ್ಷಮೆಯಾಚಿಸಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾದಿತು ಎಂದು ವಿವೇಕಾನಂದ ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.