

ಕಾರ್ಕಳ, ನ.10: ಪದವಿ ಪಡೆದು ವೃತ್ತಿಜೀವನಕ್ಕೆ ಪ್ರವೇಶಿಸುವುದು ಕಲಿಕೆಯ ಅಂತ್ಯವಲ್ಲ, ಬದಲಾಗಿ ಹೊಸ ಸವಾಲುಗಳನ್ನು ಎದುರಿಸುವ ಪಯಣದ ಆರಂಭ. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ನಿರಂತರ ಕಲಿಕೆ, ವಿಷಯಾಧಾರಿತ ಜ್ಞಾನ, ಉತ್ತಮ ಸಂವಹನ ಹಾಗೂ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಸಾರ ಭಾರತಿಯ ಮಾಜಿ ಸಿಇಒ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅಧ್ಯಕ್ಷ ಶಶಿ ಶೇಖರ್ ವೆಂಪತಿ ಅಭಿಪ್ರಾಯಪಟ್ಟರು.
ಶನಿವಾರ ನಿಟ್ಟೆ ಕ್ಯಾಂಪಸ್ನಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಮೂರನೇ ಅಧಿವೇಶನದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ನಂತರವೂ ಕಲಿಯುವ ಮನೋಭಾವವನ್ನು ಉಳಿಸಿಕೊಳ್ಳಬೇಕು. ವೃತ್ತಿಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಿ, ನಾಯಕತ್ವದ ಜವಾಬ್ದಾರಿಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ತಮ್ಮ ವೃತ್ತಿಜೀವನದ ಅನುಭವ ಹಂಚಿಕೊಂಡ ಅವರು, ಪ್ರಸಾರ ಭಾರತಿಯ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ವಿವರಿಸಿದರು. ದೂರದರ್ಶನ ಮತ್ತು ಆಕಾಶವಾಣಿಯಂತಹ ದೊಡ್ಡ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿ, ಅವುಗಳ ಕಾರ್ಯವೈಖರಿಯನ್ನು ಬದಲಾದ ಕಾಲಕ್ಕೆ ತಕ್ಕಂತೆ ರೂಪಿಸುವುದು ಸುಲಭವಾಗಿರಲಿಲ್ಲ. ಆರಂಭದಲ್ಲಿ ತಮ್ಮ ವಯಸ್ಸು ಮತ್ತು ಅನುಭವದ ಬಗ್ಗೆ ತಮಗೇ ಅರಿವಿರಲಿಲ್ಲ. ಆದರೆ ಸವಾಲುಗಳನ್ನು ಸ್ವೀಕರಿಸಿ, ತಂಡದ ವಿಶ್ವಾಸದೊಂದಿಗೆ ಮುನ್ನಡೆಯುವುದು ನಾಯಕತ್ವದ ಪ್ರಮುಖ ಗುಣ ಎಂದು ತಿಳಿಸಿದರು. ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬದಲಾವಣೆಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದರು.
ನಿಟ್ಟೆ ವಿವಿಯ ಸಹ ಕುಲಾಧಿಪತಿ ಪ್ರೊ। ಎಂ. ಶಾಂತರಾಮ ಶೆಟ್ಟಿ ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳುವಂತೆ ಕರೆ ನೀಡಿದರು.
ಕುಲಾಧಿಪತಿ ವಿಶಾಲ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಸಂಸ್ಥೆಯ ಶೈಕ್ಷಣಿಕ ಪ್ರಯತ್ನಗಳ ಪ್ರತಿಬಿಂಬವಾಗಿದ್ದು, ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಸುವರ್ಣ ಪದಕ ವಿಜೇತರನ್ನು ಗೌರವಿಸಲಾಯಿತು. ಒಟ್ಟು 839 ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ಗಳ ಪದವಿ ಪ್ರದಾನ ಮಾಡಲಾಯಿತು.
ನಿಟ್ಟೆ ವಿ.ವಿ.ಯ ಬೆಂಗಳೂರು ಕ್ಯಾಂಪಸ್ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಟ್ರಸ್ಟಿ ವಿರೇನ್ ಹೆಗ್ಡೆ, ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಪ್ರೊ. ಡಾ। ಒಮೀದ್ ಅನ್ಸಾರಿ, ಬೆಂಗಳೂರು ಕ್ಯಾಂಪಸ್ ಉಪಾಧ್ಯಕ್ಷ ಪ್ರೊ। ಸಂದೀಪ್ ಶಾಸ್ತ್ರಿ, ಕುಲಸಚಿವ ಡಾ। ಹರ್ಷ ಹಾಲಹಳ್ಳಿ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ। ಪ್ರಸಾದ್ ಬಿ. ಶೆಟ್ಟಿ, ವಿವಿಧ ಕಾಲೇಜುಗಳ ಮುಖ್ಯಸ್ಥರು, ವಿಭಾಗಗಳ ನಿರ್ದೇಶಕರು ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.


































.
.
.
.
.
.
.
.
.
.
.
.
.
.
.
.
.
.
.
.
