

ಕಾರ್ಕಳ,ಆ.22: ಕಾರ್ಕಳ ಮಹಿಳಾ ಸಾಂತ್ವನ ಕೇಂದ್ರ ಹಾಗೂ ಶಿಶುಪಾಲನಾ ಕೇಂದ್ರದಲ್ಲಿ ಕೌಟುಂಬಿಕ ಕಲಹಗಳ ವಿಚಾರದಲ್ಲಿ ಕೌನ್ಸೆಲಿಂಗ್ ನಡೆಸುವಾಗ ಅಧ್ಯಕ್ಷರು ಹಸ್ತಕ್ಷೇಪ ನಡೆಸುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ.
ಕಳೆದ 16 ವರ್ಷಗಳಿಂದ ಸಾಂತ್ವನ ಕೇಂದ್ರವು ಯಾವುದೇ ವಿವಾದಗಳಿಲ್ಲದೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಹಿಳಾ ಒಕ್ಕೂಟ ಹಾಗೂ ಸಾಂತ್ವನ ಕೇಂದ್ರದ ಅಧ್ಯಕ್ಷೆ ಯಶೋಧ ಶೆಟ್ಟಿ ಅಜೆಕಾರು ಹೇಳಿದರು.
ಅವರು ಶನಿವಾರ ಕಾರ್ಕಳ ಪತ್ರಿಕಾ ಭವನದಲ್ಲಿ ಈ ವಿಚಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಟುಂಬಿಕ ಕಲಹಗಳಿಗೆ ರಾಜಿ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಂತ್ವನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗ್ರಾಮಸಭೆಗಳಿಗೆ ತೆರಳಿ ಕೌಟುಂಬಿಕ ಕಲಹಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗಿದೆ. ಕೇಂದ್ರಕ್ಕೆ ಬರುವ ನೊಂದ ಮಹಿಳೆಯರಿಗೆ ಎಲ್ಲಾ ರೀತಿಯ ನೆರವು ನೀಡಲಾಗಿದೆ.
ಪ್ರಸ್ತುತ ಶಿಶುಪಾಲನಾ ಕೇಂದ್ರದಲ್ಲಿ ಏಳು ಮಕ್ಕಳು ಇದ್ದಾರೆ. ಕಳೆದ 16 ವರ್ಷಗಳಿಂದ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಇದಲ್ಲದೇ ಕಳೆದ ಎಂಟು ವರ್ಷಗಳ ನನ್ನ ಅವಧಿಯಲ್ಲಿ ನಯಾಪೈಸೆ ಹಣದ ದುರುಪಯೋಗವಾಗಿಲ್ಲ ಅಥವಾ ಭ್ರಷ್ಟಾಚಾರ ನಡೆದಿಲ್ಲ, ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದ ಎಂದು ಸ್ಪಷ್ಟಪಡಿಸಿದರು.
ಸಾಂತ್ವನ ಕೇಂದ್ರದ ಸಮಾಲೋಚಕರ ಆಯ್ಕೆಯ ಬಗ್ಗೆಯೂ ಸ್ಪಷ್ಟನೆ ನೀಡಿದ ಯಶೋಧ ಶೆಟ್ಟಿ, ಸಾಂತ್ವನ ಕೇಂದ್ರದ ಸಮಾಲೋಚಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಸಿಡಿಪಿಒ ಅವರದ್ದಾಗಿತ್ತು. ಸಾಂತ್ವನ ಕೇಂದ್ರದಲ್ಲಿ ಎಂಎಸ್‌ಡಬ್ಲ್ಯು ವಿದ್ಯಾರ್ಹತೆ ಹೊಂದಿರುವವರನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಸಿಡಿಪಿಒ ಅವರ ಒತ್ತಾಯದ ಮೇರೆಗೆ ಬಿಬಿಎಂ ಪದವಿ ಅರ್ಹತೆಯ ತುಂಬು ಗರ್ಭಿಣಿಯನ್ನು ಆಯ್ಕೆ ಮಾಡಲಾಗಿದ್ದು ಅವರು ಹೆರಿಗೆ ರಜೆಗೆ ಹೋದರೆ ಕೌನ್ಸೆಲಿಂಗ್ ನಡೆಸುವವರು ಯಾರು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾವಿತ್ರಿ ಮನೋಹರ್, ಸಾಂತ್ವನ ಕೇಂದ್ರದಲ್ಲಿರುವ ಸಮಾಲೋಚಕರಿಗೆ ಅನುಭವದ ಕೊರತೆಯಿರುವ ಹಿನ್ನೆಲೆಯಲ್ಲಿ ಹಿರಿತನದ ನೆಲೆಯಲ್ಲಿ ಅಧ್ಯಕ್ಷರು ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಇದನ್ನು ತಪ್ಪಾಗಿ ಅರ್ಥೈಸಬಾರದು. ಅಧ್ಯಕ್ಷರು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ ಎಂದು ಅವರು ಹೇಳಿದರು.
ಸಾಂತ್ವನ ಕೇಂದ್ರದ ಕಟ್ಟಡವನ್ನು ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಪಾಲಿಸಿಯೇ ನಿರ್ಮಿಸಲಾಗಿದೆ. ಕೇಂದ್ರದ ಕಾರ್ಯನಿರ್ವಹಣೆ, ಅಧ್ಯಕ್ಷರ ಪಾತ್ರ ಹಾಗೂ ಹಣಕಾಸಿನ ವಿಚಾರದಲ್ಲಿ ಮಾಡಲಾಗಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ರತ್ನಾವತಿ ನಾಯಕ್, ಶಾಂತ ಭಂಡಾರಿ, ವಸಂತಿ ಸುವರ್ಣ, ಜ್ಯೋತಿ ಲಕ್ಷ್ಮೀ, ಶ್ರೀಲತಾ ಶರ್ಮ ನಿಟ್ಟೆ ಹಾಗೂ ಸಾಂತ್ವನ ಮತ್ತು ಶಿಶುಪಾಲನಾ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
