ನವದೆಹಲಿ: ಅಂದಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು 1975 ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದನ್ನು ವಿರೋಧಿಸಿ ಕೇಂದ್ರ ಸರ್ಕಾರ ಜೂನ್ 25ರ ದಿನವನ್ನು ‘ಸಂವಿಧಾನ ಹತ್ಯಾ ದಿನ’ ಎಂದು ಘೋಷಿಸಿದೆ.
1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸರ್ವಾಧಿಕಾರಿ ಮನಸ್ಥಿತಿಯನ್ನು ಪ್ರದರ್ಶಿಸಿ, ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಭಾರತದ ಪ್ರಜಾಪ್ರಭುತ್ವದ ಆತ್ಮವನ್ನೇ ಕತ್ತು ಹಿಸುಕಿದ್ದರು. ಲಕ್ಷಗಟ್ಟಲೆ ಜನರನ್ನು ವಿನಾಕಾರಣ ಜೈಲಿಗೆ ಹಾಕಲಾಯಿತು ಮತ್ತು ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲಾಯಿತು. ಭಾರತ ಸರ್ಕಾರವು ಪ್ರತಿ ವರ್ಷ ಜೂನ್ 25 ಅನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಆಚರಿಸಲು ನಿರ್ಧರಿಸಿದೆ. 1975ರ ತುರ್ತುಪರಿಸ್ಥಿತಿಯ ಅಮಾನವೀಯ ನೋವನ್ನು ಸಹಿಸಿಕೊಂಡವರೆಲ್ಲರ ಅಪಾರ ಕೊಡುಗೆಯನ್ನು ಈ ದಿನ ನೆನಪಿಸುತ್ತದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಜೂನ್ 25, 1975 ರಿಂದ ಮಾರ್ಚ್ 21, 1977 ರ ಅವಧಿಗಳ ಕಾಲ ಹೇರಲಾಗಿತ್ತು. ಆಂತರಿಕ ಮತ್ತು ಬಾಹ್ಯ ಬೆದರಿಕೆಗಳನ್ನು ಉಲ್ಲೇಖಿಸಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಪ್ರಧಾನಿಯ ಸಲಹೆಯ ಮೇರೆಗೆ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತುರ್ತು ಪರಿಸ್ಥಿತಿ ಅಂಗೀಕರಿಸಿದರು. ಈ ಸಮಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇಂದಿರಾ ಗಾಂಧಿ ತಮ್ಮ ಬಹುಪಾಲು ರಾಜಕೀಯ ವಿರೋಧಿಗಳನ್ನು ಜೈಲಿಗಟ್ಟಿದ್ದರು. ಈ ಸಮಯದಲ್ಲಿ ಮಾಧ್ಯಮಕ್ಕೆ ನಿರ್ಬಂಧ ಹೇರಲಾಗಿತ್ತು.