

ಕಾರ್ಕಳ,ಆ.25:ವಸತಿ ಯೋಜನೆಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದ್ದು,ಈ ಪೈಕಿ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಕಳೆದ 3 ವರ್ಷಗಳಲ್ಲಿ ಕೇವಲ 8 ಮನೆ ಮಾತ್ರ ಮಂಜೂರಾತಿಯಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸದನಕ್ಕೆ ನೀಡಿರುವ ಮಾಹಿತಿಯಲ್ಲಿ ಬಹಿರಂಗವಾಗಿದೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು 2023 ರಿಂದ 2026 ರವರೆಗೆ ಒಟ್ಟು 3 ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳಿಗೆ ಮಂಜೂರಾದ ಮನೆಗಳು ಎಷ್ಟು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಗುರಿ ಹಾಗೂ ಮಂಜೂರಾದ ಮನೆಗಳು ಎಷ್ಟು ಎನ್ನುವ ಪ್ರಶ್ನೆಗೆ ವಸತಿ ಸಚಿವರು ಸದನದಲ್ಲಿ ಉತ್ತರಿಸಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಕಳೆದ3 ವರ್ಷಗಳಲ್ಲಿ ಒಟ್ಟು 402 ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಆದರೆ ಮಂಜೂರಾದ ಎಲ್ಲಾ ಮನೆಗಳು ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಹಾನಿಯಾದ ಮನೆಗಳನ್ನು ಪುನರ್ ನಿರ್ಮಾಣ ಮಾಡಲಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಇದಲ್ಲದೇ ಕಾರ್ಕಳ ಹ ವಿಧಾನಸಭಾ ಕ್ಷೇತ್ರದ(ಕಾರ್ಕಳ-ಹೆಬ್ರಿ) ಒಟ್ಟು ಗ್ರಾಮಗಳಿಗೆ ಕೇವಲ 8 ಮನೆಗಳು ಮಂಜೂರಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ರಾಜ್ಯ ಸರ್ಕಾರ ನೀಡಿದ ಮಾಹಿತಿಗೆ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದು,ಪ್ರಾಕೃತಿಕ ವಿಕೋಪ ಹೊರತುಪಡಿಸಿ ಅರ್ಹ ಬಡ ಜನರಿಗೆ ನಿವೇಶನ ಆಗಲಿ ವಿವಿಧ ವಸತಿ ಯೋಜನೆಗಳಡಿ ಮನೆಯಾಗಲಿ ಮಂಜೂರಾತಿ ಆಗದೇ ಇರುವುದು ನಮ್ಮ ಕರಾವಳಿ ಜಿಲ್ಲೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದ ಅತ್ಯಂತ ಘೋರ ದ್ರೋಹವಾಗಿದೆ.
ಕಾಂಗ್ರೆಸ್ ಸರ್ಕಾರ ಕರಾವಳಿಯನ್ನು ಪದೇಪದೇ ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
