ಕಾರ್ಕಳ:ಪ್ರವಾಸೋದ್ಯಮದಲ್ಲಿ ಕಾರ್ಕಳವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎನ್ನುವ ಮಹದಾಸೆಯಿಂದ ಮಂಜೂರಾದ ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನೇ ಮುಗಿಸಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಶಾಸಕ ಸುನಿಲ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ಅವರು ಸೋಮವಾರ ಬೈಲೂರಿನಲ್ಲಿ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಮುಂದುವರಿಸುವಂತೆ ಜನಾಗ್ರಹ ಸಭೆಯಲ್ಲಿ
ಮಾತನಾಡಿ, ಅಪಪ್ರಚಾರದ ಮೂಲಕ ಪರಶುರಾಮ ಥೀಮ್ ಪಾರ್ಕ್ ಯೋಜನೆ ಮುಗಿಸಬೇಕೆನ್ನುವ ಹುನ್ನಾರ. ಈ ಯೋಜನೆಯ ಬಗ್ಗೆ ಸಾರ್ವಜನಿಕರು ನಿರ್ಧಾರ ಕೈಗೊಳ್ಳಬೇಕಿದೆ. ಪರಶುರಾಮ ಥೀಮ್ ಪಾರ್ಕ್ ಸುನಿಲ್ ಕುಮಾರ್ ಆಸ್ತಿಯಲ್ಲ,ಇದು ಜನರ ಆಸ್ತಿ, ಸಮಾಜದ ಆಸ್ತಿಯಾಗಿದೆ.ಯೋಜನೆಯ ಕುರಿತು ವಿರೋಧಿಗಳು ಸುಳ್ಳು ಪ್ರಚಾರ ನಡೆದರೂ ನಾನು ಈ ಕುರಿತು ಟೀಕೆ ಮಾಡಿಲ್ಲ ಸತ್ಯ ಏನು ಎನ್ನುವುದು ಜನರಿಗೆ ಗೊತ್ತಿದೆ. ಯಾರು ಕಾರ್ಕಳವನ್ನು ಪ್ರೀತಿಸುತ್ತಾರೋ ಅವರು ಅಭಿವೃದ್ಧಿ ಪರವಾಗಿ ಇರುತ್ತಾರೆ, ಕಾರ್ಕಳವನ್ನು ದ್ವೇಷಿಸುವವರು ಅಭಿವೃದ್ಧಿಯನ್ನು ವಿರೋಧಿಸುತ್ತಾರೆ. ಪರಶುರಾಮ ಥೀಮ್ ಪಾರ್ಕ್ ಕುರಿತು ದಿನೇದಿನೇ ಅಪಪ್ರಚಾರ ನಡೆಯುತ್ತಲೇ ಇದೆ. ಯೋಜನೆಯ ಗುಣಮಟ್ಟದಲ್ಲಿ ವ್ಯತ್ಯಾಸಗಳಿದ್ದರೆ ತನಿಖೆ ನಡೆಸಿ ಎಂದು ಅಂದಿನ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದೆ.ಇಂದು ಕೂಡ ನನ್ನ ಹೇಳಿಕೆಗೆ ಬದ್ಧನಿದ್ದೇನೆ ಎಂದರು. ಕಳೆದ ಒಂದು ವರ್ಷದಿಂದ ಪರಶುರಾಮ ಥೀಮ್ ಪಾರ್ಕ್ ಮುಚ್ಚಲಾಗಿದೆ ಇದರಿಂದ ಕಾರ್ಕಳದ ಪ್ರವಾಸೋದ್ಯಮಕ್ಕೆ ಆದ ನಷ್ಟ ಸರಿದೂಗಿಸುವವರು ಯಾರು ಎಂದು ಪ್ರಶ್ನಿಸಿದರು.
ಅಂದು ಉಸ್ತುವಾರಿ ಸಚಿವರು ಥೀಮ್ ಪಾರ್ಕಿಗೆ ಬಂದು ಹೋದ ಬಳಿಕ ಅ. 4 ರಂದು ಮೂರ್ತಿಯ ವಿನ್ಯಾಸ ಹಾಗೂ ಬಲಪಡಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಪರದೆ ಹರಿದು ಕಾಮಗಾರಿಗೆ ಅಡ್ಡಿಪಡಿಸಿದ್ದರೂ ಜಿಲ್ಲಾಡಳಿತ ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಯೋಜನೆಗೆ ನಮ್ಮ ಸರ್ಕಾರ ಬಿಡುಗಡೆ ಮಾಡಿದ್ದ 14 ಕೋಟಿ ಪೈಕಿ 8 ಕೋಟಿ ಬಾಕಿ ಉಳಿಸಿ ಯೋಜನೆ ಮುಗಿಸಲು ಪಿತೂರಿ ನಡೆಸಲಾಗುತ್ತಿದೆ. ಅಂದು ಮೂರ್ತಿ ಸರಿಯಿಲ್ಲ ಎಂದವರು ಇಂದು ಶಿಲ್ಪಿ ಜಿಎಸ್ಟಿ ಕಟ್ಟಿಲ್ಲ ಎನ್ನುವವರ ಮನೆಗೆ ತೆರಿಗೆ ಕಟ್ಟಿಲ್ಲ ಎಂದು ರೇಡ್ ಆಗಿದೆ ಎಂದು ಉದಯ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು.
ಪರದೆ ಹರಿದ ದಿನದಿಂದ ಮಣ್ಣು ಹಾಕಿದವರೆಗೆ 198 ದಿನಗಳಲ್ಲಿ ತನಿಖೆ ಯಾಕೆ ಆಗಿಲ್ಲ ಎಂದು,ಕಾಂಗ್ರೆಸ್ ಸರ್ಕಾರಕ್ಕೆ ಈ ಯೋಜನೆ ಮುಗಿಸಲು ಸಾಧ್ಯವಾಗಿಲ್ಲ ಎಂದರೆ ನಮಗೆ ಕೊಡಿ ನಾವು ಭಿಕ್ಷೆ ಬೇಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.
ಅಯ್ಯೋಧ್ಯೆಯ ಅಕ್ಷತೆ ಯಾವುದು ಸಿದ್ದರಾಮಯ್ಯನ ಅಕ್ಕಿ ಯಾವುದು ಎಂದು ತಿಳಿಯದವರಿಗೆ ಪರಶುರಾಮ ಥೀಮ್ ಪಾರ್ಕ್ ಯಾವುದು ಧಾರ್ಮಿಕ ಕ್ಷೇತ್ರದ ವ್ಯತ್ಯಾಸ ಗೊತ್ತಾಗಲು ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ನನಗೆ ಹೋರಾಟದ ಕುರಿತು ಪಾಠ ಮಾಡಲು ಬರಬೇಡಿ ನೀವು ಎರಡು ಜಿಲ್ಲೆಯಿಂದ ನಾಯಕರನ್ನು ಕರೆಸಿ ಸುಳ್ಳು ಆರೋಪ ಹೊರಿಸಿ ಪ್ರತಿಭಟನೆ ಮಾಡಿದ್ರಿ,ನನಗೆ ಪ್ರತಿಭಟನೆಯ ಪಾಠ ಕಲಿಸಲು ಹೊರಟವರಿಗೆ, ನಾನು ಮನಸ್ಸು ಮಾಡಿದ್ರೆ ರಾಜ್ಯದ 66 ಜನ ಶಾಸಕರನ್ನು ಕರೆಸಿ ಪ್ರತಿಭಟನೆ ಮಾಡಲು ಗೊತ್ತಿದೆ ಎಂದು ಕಾಂಗ್ರೆಸ್ ಗೆ ಸವಾಲೆಸೆದರು.
ಒಂದು ವರ್ಷದ ಬಳಿಕ ಸಿಐಡಿ ತನಿಖೆಗೆ ಆದೇಶ ನೀಡಿದೆ. ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಆದೇಶ ನೀಡಿದ್ದು, ಸರ್ಕಾರ ಸಿಐಡಿ ತನಿಖೆ ನೆಪದಲ್ಲಿ ಕಾಮಗಾರಿ ತಡೆ ಹಿಡಿಯಲು ಯತ್ನಿಸಿದೆ ಇದಲ್ಲದೇ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತರಲು ಕಾಂಗ್ರೆಸ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು,ಈ ಯೋಜನೆಯನ್ನು ಸ್ಥಗಿತಗೊಳಿಸಲು ಎಲ್ಲಾ ಪ್ರಯತ್ನ ನಡೆದಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದರು.
ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಸತ್ಯಾಂಶ ಹೊರಬರಲಿ,ಅಲ್ಲದೇ ಬಾಕಿ ಉಳಿದ ಅನುದಾನ ಕೂಡಲೇ ಬಿಡುಗಡೆಗೊಳಿಸಿ ಕಾಮಗಾರಿ ಮುಗಿಸಿ ಕಾರ್ಕಳವನ್ನು ಪ್ರವಾಸೋದ್ಯಮಕ್ಕೆ ತೆರೆದು ಕೊಳ್ಳಬೇಕೆಂದು ಆಗ್ರಹಿಸಿದರು
ಸುಮಿತ್ ಶೆಟ್ಟಿ ಮಾತನಾಡಿ,ಕಾಂಗ್ರೆಸ್ ನಾಯಕರು ಕಾರ್ಕಳದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ, ಪರಶುರಾಮ ಥೀಮ್ ಪಾರ್ಕ್ ಮುಂದುವರಿದ ಕಾಮಗಾರಿ ನಡೆಸಲು ಅಂದಿನ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು, ಆದರೆ ಕಾಮಗಾರಿ ಆರಂಭಿಸಿದಾಗ ಕಾಂಗ್ರೆಸ್ ನಾಯಕರು ಅಡ್ಡಿಪಡಿಸಿದರು,ವಿಪರ್ಯಾಸವೆಂದರೆ ಹೈಕೋರ್ಟ್ ಆದೇಶವಿದ್ದರೂ ಜಿಲ್ಲಾಡಳಿತವೇ ಕಾಮಗಾರಿಗೆ ತಡೆ ನೀಡಿದ್ದು, ನೇರವಾಗಿ ಜಿಲ್ಲಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಓಂಕಾರ್ ನಾಯಕ್ ಮಾತನಾಡಿ,ಅಭಿವೃದ್ಧಿ ಕಾರ್ಯದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು, ಈ ಯೋಜನೆಯನ್ನು ಎಲ್ಲರೂ ಒಟ್ಟಾಗಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಹೇಶ್ ಶೆಟ್ಟಿ ಕುಡುಪುಲಾಜೆ ಮಾತನಾಡಿ, ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ವಿನಾಕಾರಣ ರಾಜಕೀಯ ಮಾಡುತ್ತಿದೆ.ಪ್ರವಾಸೋದ್ಯಮ ಅಭಿವೃದ್ಧಿಯಿಂದ ಎಷ್ಟೋ ಬಡವರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಪರಶುರಾಮ ಥೀಮ್ ಪಾರ್ಕಿನ ಕಾಮಗಾರಿಯನ್ನು ಸರ್ಕಾರ ಆದಷ್ಟು ಬೇಗ ಮುಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಹೋರಾಟ ನಡೆಸಬೇಕಾದೀತು ಎಂದು ಮಹೇಶ್ ಶೆಟ್ಟಿ ಎಚ್ಚರಿಸಿದರು
ಜನಾಗ್ರಹ ಸಭೆಯ ಸಂಚಾಲಕ ಸಚ್ಚಿದಾನಂದ ಶೆಟ್ಟಿ,ಪರಶುರಾಮ ಥೀಮ್ ಪಾರ್ಕಿನ ಜಾಗ ಗೋಮಾಳ ಎಂದಾದರೆ ಕಳೆದ ಹತ್ತಾರು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾಗ ಗೋಮಾಳದ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಜನಾಗ್ರಹ ಸಭೆಯಲ್ಲಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಸುಜಾತ ಬೈಲೂರು, ಮಹೇಶ್ ಶೆಣೈ ಬೈಲೂರು, ಪ್ರಶಾಂತ ಶೆಟ್ಟಿ, ರಮೇಶ್ ಕಿಣಿ,ಬೋಳ ಪ್ರಸಾದ್ ಕಾಮತ್, ಪಳ್ಳಿ ಪಂಚಾಯತ್ ಅದ್ಯಕ್ಷೆ ಉಷಾ ಅಂಚನ್, ಹಿರ್ಗಾನ ಪಂಚಾಯತ್ ಅಧ್ಯಕ್ಷೆ ಸುನಿತಾ ,ಎರ್ಲಪಾಡಿ ಪಂಚಾಯತ್ ಅಧ್ಯಕ್ಷ ಸುನಿಲ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು
ಸಂದೀಪ್ ಸ್ವಾಗತಿಸಿ, ಉದಯ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು
