ಹೆಬ್ರಿ:ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕ ಮತ್ತು ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ 110ನೇ ನೇ ಸಂಸ್ಥಾಪನಾ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮವು ಹೆಬ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ವಹಿಸಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ ಮರಕಾಲ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯದ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಸಾಹಿತ್ಯ ಕೃತಿಗಳ ಓದು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ಒಬ್ಬ ಉತ್ತಮ ಕೇಳುಗ ಉತ್ತಮ ಭಾಷಣಕಾರನಾಗಬಲ್ಲ; ಒಬ್ಬ ಉತ್ತಮ ಓದುಗ ಉತ್ತಮ ಬರೆಹಗಾರನಾಗಬಲ್ಲ. ಉತ್ತಮ ಪುಸ್ತಕಗಳು ಬದುಕಿಗೆ ಪ್ರೇರಣೆಯನ್ನು ನೀಡುತ್ತವೆ. ಮಾರ್ಗದರ್ಶನ ಮಾಡುತ್ತವೆ. ನಿರಂತರ ಓದು ಬದುಕನ್ನು ರೂಪಿಸುತ್ತವೆ ಎಂಬುವುದನ್ನು ತಮ್ಮದೇ ಬದುಕಿನ ಉದಾಹರಣೆಗಳ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಆಶಾಲತಾ ಬಿ, ಖ್ಯಾತ ಲೇಖಕಿ ಶ್ರೀ ಮುದ್ರಾಡಿ,ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ್ ಕುಮಾರ್ ಎಸ್ ಉಪಸ್ಥಿತರಿದ್ದರು.
ಕ.ಸಾ.ಪ ಹೆಬ್ರಿ ತಾಲೂಕು ಘಟಕ ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ಸ್ವಾಗತಿಸಿ ಪದಾಧಿಕಾರಿ ಮಹೇಶ ಹೈಕಾಡಿ ವಂದಿಸಿದರು. ವಿದ್ಯಾರ್ಥಿನಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.
