ಬೆಂಗಳೂರು: ಐತಿಹಾಸಿಕ ಸ್ಥಳಗಳು ಭಾರತೀಯ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಟ್ಟಿದ್ದು, ಅಂತಹ ಸ್ಥಳಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಗದಿಪಡಿಸಿದ ವ್ಯಾಪ್ತಿಯೊಳಗೆ ಯಾವುದೇ ನಿರ್ಮಾಣ ಕಾಮಗಾರಿಗೆ ಅವಕಾಶ ಇರುವುದಿಲ್ಲ, ಆದರೂ ಸಂರಕ್ಷಿತ ಸ್ಥಳಗಳ ಬಳಿ ನಿರ್ಮಾಣ ಚಟುವಟಿಕೆಗಳನ್ನು ನಡೆಸಲು ಪುರಾತತ್ವ ಇಲಾಖೆಯ ಅನುಮತಿ ಕಡ್ಡಾಯವಾಗಿದೆ ಎಂದು ಕರ್ನಾಟಕ ಹೈಕೋಟ್ ಸ್ಪಷ್ಟಪಡಿಸಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅನುಮತಿಯಿಲ್ಲದೇ ನಿರ್ದಿಷ್ಟ ವ್ಯಾಪ್ತಿಯಲ್ಲಿ ಸಂರಕ್ಷಿತ ಸ್ಥಳಗಳ ಬಳಿ ನಿರ್ಮಾಣ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ. ಮಂಗಳೂರು ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಆದೇಶ ನೀಡಿದ್ದಾರೆ.ಮಂಗಳೂರು ನಿವಾಸಿಯೊಬ್ಬರು 1993 ರಲ್ಲಿ ನ್ಯಾಯಾಲಯದಲ್ಲಿ ವಿಭಜನೆಯ ಮೊಕದ್ದಮೆಯ ಮೂಲಕ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದರು.2023ರಲ್ಲಿ ಅನುಮೋದಿತ ಯೋಜನೆಯೊಂದಿಗೆ ಮನೆ ನಿರ್ಮಿಸಲು ಮಹಾನಗರ ಪಾಲಿಕೆ ಅನುಮತಿ ನೀಡಿತ್ತು.ಕಟ್ಟಡ ನಿರ್ಮಾಣವು ಒಂದು ನಿರ್ದಿಷ್ಟ ಹಂತವನ್ನು ತಲುಪಿದ ನಂತರ, ಸಂರಕ್ಷಿತ ಸ್ಮಾರಕವಾದ ಮಂಗಳಾ ದೇವಿ ದೇವಾಲಯದ 150 ಮೀಟರ್ ಒಳಗೆ ನಿರ್ಮಾಣವಿದೆ ಎಂಬ ಆಧಾರದ ಮೇಲೆ ಪುರಾತತ್ವ ಇಲಾಖೆ ಕಾಮಗಾರಿ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿತು. ಪುರಾತತ್ವ ಇಲಾಖೆ ನಿರಾಕ್ಷೇಪಣಾ ಪತ್ರಕ್ಕಾಗಿ ನೀಡಿದ್ದ ಮನವಿಯನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, “ಐತಿಹಾಸಿಕ ಪ್ರಾಮುಖ್ಯತೆಯ ಸ್ಮಾರಕಗಳು ಮತ್ತು ಸ್ಥಳಗಳನ್ನು ವಿರೂಪಗೊಳಿಸುವಿಕೆ ಮತ್ತು ವಿರೂಪತೆಯಿಂದ ರಕ್ಷಿಸುವ ಅಗತ್ಯವಿದೆ ಮತ್ತು ಐತಿಹಾಸಿಕ ಸ್ಮಾರಕವನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಕಟ್ಟಡ ನಿರ್ಮಾಣ ಕಾಮಗಾರಿಯು ನಿಷೇಧಿತ ವಲಯದಲ್ಲಿ ಇಲ್ಲ, ಬದಲಾಗಿ ನಿಯಂತ್ರಿತ ಪ್ರದೇಶದಲ್ಲಿ ನಿರ್ಮಾಣವಾಗಿರುವುದರಿಂದ ನಿರಾಕ್ಷೇಪಣಾ ಪತ್ರ ನೀಡಲು ಯಾವುದೇ ಅಡೆತಡೆಗಳಿಲ್ಲ ಎಂದು ಅರ್ಜಿದಾರರ ವಕೀಲರು ಹೇಳಿದ್ದಾರೆ.ಗೂಗಲ್ ಅರ್ಥ್ ಫೋಟೋ ಪ್ರಕಾರ ಇದು ದೇವಾಲಯದಿಂದ 151 ಮೀಟರ್ ದೂರದಲ್ಲಿದೆ ಎಂದು ವಾದಿಸಿದ್ದು,ಗೂಗಲ್ ಅರ್ಥ್ ಬಳಸಿ 64 ಮೀಟರ್ ಎನ್ನುವ ಪುರಾತತ್ವ ಇಲಾಖೆಯ ಅಂದಾಜು ತಪ್ಪಾಗಿದೆ ಮತ್ತು ಅರ್ಜಿದಾರರು ಕಾನೂನಿನ ಅಡಿಯಲ್ಲಿ ಅನುಮತಿಸಲಾದ ನವೀಕರಣವನ್ನು ಮಾಡುತ್ತಿದ್ದಾರೆ.ಪುರಾತತ್ವ ಇಲಾಖೆಯ ಅನುಮತಿ ಇಲ್ಲದೆ ಇಲ್ಲಿಯವರೆಗೆ ಮಾಡಿದ ಕಾಮಗಾರಿಗೆ ಅವಕಾಶ ನೀಡಿದ್ದು ಯಾಕೆ ಎಂದು ವಕೀಲರು ವಾದಿಸಿದ್ದಾರೆ. ಆದರೆ ಅರ್ಜಿದಾರರ ಪರ ವಕೀಲರ ವಾದವನ್ನು ಒಪ್ಪದ ನ್ಯಾಯಪೀಠ, “ಇದನ್ನು ಉದ್ದೇಶಪೂರ್ವಕವಾಗಿ ಬೇರೆ ಕೋನದಿಂದ ಚಿತ್ರೀಕರಿಸಲಾಗಿದೆ ಮತ್ತು ದೂರವು ಬದಲಾಗುವಂತೆ ವಿಸ್ತರಿಸಲಾಗಿದೆ. ಪುರಾತತ್ವ ಇಲಾಖೆ ತೆಗೆದ ಗೂಗಲ್ ಅರ್ಥ್ ಚಿತ್ರವನ್ನು ಇರಿಸಿದ್ದಾರೆ, ಇದು ನಿರ್ಮಿಸಲಾಗುತ್ತಿರುವ ಆಸ್ತಿಯು ಸಂರಕ್ಷಿತ ಸ್ಮಾರಕದಿಂದ 64 ಮೀಟರ್ ಒಳಗೆ ಇದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಲ್ಲದೇ ಕಾನೂನು ಪ್ರಕಾರ ಯಾವುದೇ ರೀತಿಯ ಹೊಸ ನಿರ್ಮಾಣಗಳಿಗೆ ಅವಕಾಶವಿಲ್ಲ ಆದರೆ ದುರಸ್ತಿ ಮತ್ತು ಸಣ್ಣ ನವೀಕರಣವನ್ನು ಮಾತ್ರ ಮಾಡಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ,ಅರ್ಜಿದಾರರಿಗೆ ನಿರ್ಮಾಣವನ್ನು ಮುಂದುವರಿಸದAತೆ ನಿರ್ದೇಶನ ನೀಡಿ, ಕಾನೂನಿಗೆ ವಿರುದ್ಧವಾಗಿ ನಿರ್ಮಾಣಕ್ಕೆ ಅನುಮತಿ ನೀಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ನ್ಯಾಯಾಲಯ ಆದೇಶಿಸಿದೆ.