ಹೆಬ್ರಿ: ಹೆಬ್ರಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಪ್ರತಿ ವರುಷವೂ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಶಿಕ್ಷಕ ದಿನಾಚರಣೆ ಪ್ರಯುಕ್ತ ಹಿರಿಯ ನಿವೃತ್ತ ದೈಹಿಕ ಶಿಕ್ಷಕ ಕೃಷ್ಣಮೂರ್ತಿ ರಾವ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಗೌರವ ಸ್ವೀಕರಿಸಿ ಮತನಾಡಿದ ಅವರು, ನಿವೃತ್ತಿಯ ಈ ಕಾಲದಲ್ಲಿ ಶಿಷ್ಯರು ಮತ್ತು ಒಡನಾಡಿಗಳನ್ನು ಕೂಡಿಸಿಕೊಂಡು ಹಿರಿಯ ಶಿಕ್ಷಕರನ್ನು ಗುರುತಿಸುವ ಮತ್ತು ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಅಭಿನಂದನೀಯ ಎಂದರು. ವೃತ್ತಿ ಜೀವನದ ಘಟನೆಗಳನ್ನು ನೆನಪಿಸಿಕೊಂಡು ಹರ್ಷ ವ್ಯಕ್ತಪಡಿಸಿದರು.
ಡಾ| ಸುಲತಾ ಹೆಗ್ಡೆ ಅವರು ಮಾತನಾಡಿ ಕೃಷ್ಣಮೂರ್ತಿರಾವ್ ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿದವರು. ಅವರ ಕಾರ್ಯ ಬದ್ಧತೆ ಮತ್ತು ಶಿಸ್ತು ವಿದ್ಯಾರ್ಥಿಗಳು ಮತ್ತು ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿತ್ತು.
ಶ್ರೀನಿವಾಸ ಭಂಡಾರಿಯವರು ಮಾತನಾಡಿ ಕೆ. ಕೃಷ್ಣಮೂರ್ತಿ ರಾವ್ ಅವರು ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಕಲಿಸಿ, ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿ, ತಿದ್ದಿ ಸರಿ ಮಾರ್ಗದಲ್ಲಿ ನಡೆಯುವಂತೆ ಮಾಡಿದವರು. ನಿವೃತ್ತ ಶಿಕ್ಷಕರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಗಳ ಮೂಲಕ ಹಿರಿಯ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜದಲ್ಲಿ ಧನಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಮತ್ತು ಕಲಿಸುವ ಕಾರ್ಯವಾಗುತ್ತದೆ ಎಂದರು.
ಮಹೇಶ ಹೈಕಾಡಿ ಸ್ಟಾಗತಿಸಿ,ಪ್ರೀತೇಶ ಕುಮಾರ್ ಧನ್ಯವಾದವಿತ್ತರು. ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ಕಾರ್ಯಕ್ರಮ ನಿರೂಪಿಸಿದರು.