Share this news

ಮಂಗಳೂರು, ಅ. 23: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರವಾದ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಧಾರ್ಮಿಕ ಸೇವೆಗಳ ದರವನ್ನು ಪರಿಷ್ಕರಿಸಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆದೇಶ ಹೊರಡಿಸಿದೆ. ದೇವಸ್ಥಾನದಲ್ಲಿ ನೆರವೇರುವ ಬೆಳ್ಳಿ ರಥೋತ್ಸವ ಹಾಗೂ ಪಂಚಾಮೃತ ಮಹಾಭಿಷೇಕ ಸೇವೆಗಳ ದರವನ್ನು ಹೆಚ್ಚಿಸಲಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಈ ನೂತನ ದರಗಳು ಅನ್ವಯವಾಗಲಿದ್ದು,ಭಕ್ತಾದಿಗಳಿಗೆ ದೇವರ ಸೇವೆಗೂ ದರ ಏರಿಕೆ ಬಿಸಿ ತಟ್ಟಿದೆ.

ಕಳೆದ 2026ರ ಮೇ 20 ರಂದು ಸೇವಾ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಕಚೇರಿಯು ಈ ಪ್ರಸ್ತಾವನೆಯನ್ನು ಅನುಮೋದಿಸಿ ಅಧಿಕೃತ ಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.ನೂತನ ಆದೇಶದ ಪ್ರಕಾರ, ಭಕ್ತರು ನೆರವೇರಿಸುವ ಎರಡು ಪ್ರಮುಖ ಸೇವೆಗಳ ದರ ಹಾಗೂ ಅದರ ಖರ್ಚು-ವೆಚ್ಚಗಳ ಹಂಚಿಕೆಯನ್ನು ಇಲಾಖೆ ಸ್ಪಷ್ಟವಾಗಿ ನಿಗದಿಪಡಿಸಿದೆ.

ಬೆಳ್ಳಿ ರಥೋತ್ಸವ ಸೇವೆಗೆ ಒಟ್ಟು 12,000 ರೂಪಾಯಿ ನಿಗದಿಪಡಿಸಲಾಗಿದೆ. ಇದರಲ್ಲಿ ದೇವಸ್ಥಾನದ ಆಡಳಿತ ನಿಧಿಗೆ 3,000 ರೂಪಾಯಿ ಸಂದಾಯವಾಗಲಿದ್ದು, ಸೇವೆಗೆ ಅಗತ್ಯವಿರುವ ಪೂಜಾ ಸಾಮಗ್ರಿ ಹಾಗೂ ಇತರೆ ಪದಾರ್ಥಗಳ ವೆಚ್ಚಕ್ಕಾಗಿ 9,000 ರೂಪಾಯಿ ಮೀಸಲಿಡಲಾಗಿದೆ.ಪಂಚಾಮೃತ ಮಹಾಭಿಷೇಕ ಸೇವೆಗೆ ಒಟ್ಟು 11,000 ರೂಪಾಯಿ ನಿಗದಿಯಾಗಿದೆ. ಇದರಲ್ಲಿ 1,000 ರೂಪಾಯಿ ದೇವಸ್ಥಾನದ ನಿಧಿಗೆ ಜಮೆಯಾದರೆ, ಮಹಾಭಿಷೇಕಕ್ಕೆ ಬೇಕಾಗುವ ಪದಾರ್ಥಗಳು ಮತ್ತು ಅಗತ್ಯ ಸಾಮಗ್ರಿಗಳ ವೆಚ್ಚಕ್ಕೆ 10,000 ರೂಪಾಯಿ ನಿಗದಿ ಮಾಡಲಾಗಿದೆ.

ಧಾರ್ಮಿಕ ಸೇವೆಗಳನ್ನು ನಡೆಸಲು ಮಾರುಕಟ್ಟೆಯಲ್ಲಿ ಅಗತ್ಯವಿರುವ ಸಾಮಗ್ರಿಗಳು ಮತ್ತು ಪದಾರ್ಥಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗಿದೆ. ಸೇವೆಗಳ ಸುಗಮ ನಿರ್ವಹಣೆಗೆ ಪೂರಕವಾಗಿ ಸಾಮಗ್ರಿಗಳ ವೆಚ್ಚವನ್ನು ಪ್ರತ್ಯೇಕವಾಗಿ ನಮೂದಿಸಿರುವುದು ಈ ಬಾರಿಯ ದರಪಟ್ಟಿಯ ವೈಶಿಷ್ಟ್ಯವಾಗಿದೆ. ಈ ಪರಿಷ್ಕೃತ ದರಗಳು ಮುಂದಿನ ಮೂರು ವರ್ಷಗಳ ಕಾಲ ಚಾಲ್ತಿಯಲ್ಲಿರಲಿವೆ.

ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯು ಹೊರಡಿಸಿರುವ ಆದೇಶದ ಪ್ರತಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಗೆ ರವಾನಿಸಲಾಗಿದೆ. ನಾಗದೋಷ ನಿವಾರಣೆ ಹಾಗೂ ಹರಕೆ ತೀರಿಸಲು ಪ್ರತಿದಿನ ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಇನ್ನುಮುಂದೆ ಈ ಪ್ರಮುಖ ಸೇವೆಗಳನ್ನು ಅರ್ಪಿಸಲು ಭಕ್ತರು ಪರಿಷ್ಕೃತ ದರ ಪಾವತಿಸಬೇಕಿದೆ.

 

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *