
ಬೆಂಗಳೂರು,ಜು.26:ಬಡತನ ರೇಖೆಗಿಂತ ಕೆಳಗಿರುವ ಪಡಿತರ ಕಾರ್ಡ್ದಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಬಿಪಿಎಲ್ ಫಲಾನುಭವಿಗಳ ವಾರ್ಷಿಕ ಆದಾಯದ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಆಡಳಿತಾತ್ಮಕ ಸುಧಾರಣಾ ಆಯೋಗದ ಸಲಹೆಯಂತೆ ಈ ಕುರಿತು ಶಿಫಾರಸು ಮಾಡಲು ಸಿದ್ಧತೆಗಳು ನಡೆದಿವೆ. ಸದ್ಯ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು 1.20 ಲಕ್ಷ ರೂ ವಾರ್ಷಿಕ ಆದಾಯದ ಮಿತಿಯಿದ್ದು, ಅದನ್ನು 3 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ಕುರಿತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಸುಳಿವು ನೀಡಿದ್ದಾರೆ.
ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬಿಪಿಎಲ್ ಕಾರ್ಡ್ ಆದಾಯ ಮಿತಿ ಸಡಿಲಗೊಳಿಸುವಂತೆ ನಿರಂತರವಾಗಿ ನೀಡುತ್ತಿದ್ದ ಮನವಿಗಳಿಗೆ ಸ್ಪಂದಿಸಿರುವ ಸರ್ಕಾರ, ಪ್ರಸ್ತುತ ಈ ನಿರ್ಧಾರದ ಸಾಧಕ-ಬಾಧಕಗಳನ್ನು ಪರಿಶೀಲಿಸುತ್ತಿದೆ. ಸರ್ಕಾರದ ಈ ಪ್ರಸ್ತಾಪಕ್ಕೆ ಅಂತಿಮ ಅನುಮೋದನೆ ದೊರೆತರೆ, ಸದ್ಯ ಎಪಿಎಲ್ (ಂPಐ) ಕಾರ್ಡ್ ಹೊಂದಿರುವ ಹಲವು ಮಧ್ಯಮ ವರ್ಗದ ಹಾಗೂ ಅರ್ಹ ಕುಟುಂಬಗಳಿಗೆ ನೂತನವಾಗಿ ಬಿಪಿಎಲ್ ಪಟ್ಟಿಗೆ ಸೇರ್ಪಡೆಯಾಗುವ ಉತ್ತಮ ಅವಕಾಶ ಸಿಗಲಿದೆ. ಇದರಿಂದ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ದಾರರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಲಿದೆ. ಬಿಪಿಎಲ್ ಫಲಾನುಭವಿಗಳ ಸಂಖ್ಯೆ ಹೆಚ್ಚಾದರೆ ಉಚಿತ ಪಡಿತರ ಹಾಗೂ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವುದು ಸರ್ಕಾರಕ್ಕೆ ಆರ್ಥಿಕ ಹಾಗೂ ಆಡಳಿತಾತ್ಮಕವಾಗಿ ದೊಡ್ಡ ಸವಾಲಾಗುವ ಸಾಧ್ಯತೆಯಿದೆ. ಸದ್ಯ ರಾಜ್ಯದಲ್ಲಿ ಸುಮಾರು 1.20 ಕೋಟಿ ಬಿಪಿಎಲ್ ಕಾರ್ಡ್ದಾರರಿದ್ದಾರೆ. ಇತ್ತೀಚೆಗಷ್ಟೇ ಅನರ್ಹರನ್ನು ತಡೆಯುವ ಉದ್ದೇಶದಿಂದ ಪರಿಷ್ಕರಣೆ ನಡೆಸಿದ್ದ ಸರ್ಕಾರ, ಐಟಿ ಪಾವತಿದಾರರು ಹಾಗೂ ಅಕ್ರಮವಾಗಿ ಕಾರ್ಡ್ ಪಡೆದಿದ್ದ ಸುಮಾರು 3 ರಿಂದ 4 ಲಕ್ಷ ಜನರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿತ್ತು.



.
.
.
.
.
.
.
.
.
.
.
.
.
.
.
.
.
.
.
.
