

.
.
.
.

ಕಾರ್ಕಳ, ಫೆ. 02:ಕೌಟುಂಬಿಕ ಕಲಹ ತಾರಕಕ್ಕೇರಿ ಗಂಡನಿಂದಲೇ ತೀವ್ರ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ನೂರಾಳ್’ಬೆಟ್ಟು ಗ್ರಾಮದ ಗುಮ್ಮೆತ್ತು ನಿವಾಸಿ ಗೀತಾ ಎಂಬವರು ಗಂಡನಿಂದ ಹಲ್ಲೆಗೊಳಗಾಗಿ ಮೃತಪಟ್ಟ ಮಹಿಳೆ.
ಘಟನೆ ಹಿನ್ನೆಲೆ:
ನೂರಾಳ್’ಬೆಟ್ಟು ಗ್ರಾಮದ ಸುನಿಲ್ ಕುಮಾರ್ ಹಾಗೂ ಗೀತಾ ದಂಪತಿ ನಡುವೆ ಕಳೆದ ಜನವರಿ 27ರಂದು ಬೆಳಗ್ಗೆ ಕೌಟುಂಬಿಕ ಕಲಹದಿಂದ ಗಲಾಟೆ ನಡೆದಿತ್ತು. ಈ ಜಗಳ ವಿಕೋಪಕ್ಕೆ ತೆರಳಿ ಪತಿ ಸುನೀಲ್ ಕುಮಾರ್ ತನ್ನ ಪತ್ನಿ ಗೀತಾ ಅವರಿಗೆ ದೈಹಿಕ ಹಲ್ಲೆ ನಡೆಸಿದ ಪರಿಣಾಮ ಗೀತಾ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಗೀತಾ ಅವರನ್ನು ಮಂಗಳೂರಿನ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ವೈದ್ಯರ ಮಾಹಿತಿ ಪ್ರಕಾರ ಗೀತಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಎದೆ ಮೂಳೆಗಳು ಮುರಿದು, ಹೊಟ್ಟೆಯ ಒಳಭಾಗಕ್ಕೂ ತೀವ್ರ ಗಾಯಗಳಾದ ಪರಿಣಾಮ ಲಿವರ್ ಹಾಗೂ ಕಿಡ್ನಿಗೂ ಹಾನಿಯಾಗಿತ್ತು ಎನ್ನುವ ವಿಚಾರ ಬಯಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 2ರಂದು ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಆರೋಪಿ ಪತಿ ಸುನೀಲ್ ಕುಮಾರ್ ಎಂಬಾತನನ್ನು ಬಂಧಿಸಿ ಜೈಲಿಗೆ ಹಾಕಿದ್ದು, ಇದೀಗ ಮಹಿಳೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

.
.
.
.