
ಮಣಿಪಾಲ,ಜು.23: ಆಧುನಿಕ ಸಂತಾನೋತ್ಪತ್ತಿ ವಿಜ್ಞಾನದ ಅದ್ಭುತವನ್ನು ಸಾಮಾನ್ಯ ಜನರ ಸಮೀಪಕ್ಕೆ ತರುವ ನಿಟ್ಟಿನಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು, ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಜುಲೈ 25ರಂದು ವಿಶ್ವ ಭ್ರೂಣಶಾಸ್ತ್ರಜ್ಞರ ದಿನವನ್ನು ಆಚರಿಸಲಿದೆ. “ಐವಿಎಫ್ ಪ್ರಯೋಗಾಲಯದಲ್ಲಿ ಜೀವನದ ಅದ್ಭುತವನ್ನು ಅನುಭವಿಸಿ” ಎಂಬ ಧ್ಯೇಯದಡಿಯಲ್ಲಿ ನಡೆಯಲಿರುವ ಈ ಜಾಗೃತಿ ಕಾರ್ಯಕ್ರಮವು ಬೆಳಗ್ಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೆ, ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಆವರಣದಲ್ಲಿರುವ ಮಣಿಪಾಲ್ ಸೆಂಟರ್ ಫಾರ್ ಎಂಬ್ರಿಯಾಲಜಿ ಅಂಡ್ ರಿಪ್ರೊಡಕ್ಟಿವ್ ಸೈನ್ಸ್ ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಣಿಪಾಲದ ಡೀನ್ ಡಾ. ಅನಿಲ್ ಭಟ್ ಅವರು, ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮವು ಎಲ್ಲರಿಗೂ ಮುಕ್ತವಾಗಿದ್ದು, ಉಚಿತ ನೋಂದಣಿಯ ವ್ಯವಸ್ಥೆಯಿದೆ. ಫಲವತ್ತತೆ, ಭ್ರೂಣಶಾಸ್ತ್ರ ಮತ್ತು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದ್ದು, ಮಗುವಿನ ಕನಸಿನಲ್ಲಿರುವ ದಂಪತಿಗಳು ಮತ್ತು ಮಹತ್ವಾಕಾಂಕ್ಷಿ ಭ್ರೂಣಶಾಸ್ತ್ರಜ್ಞರು ಹಾಗೂ ಜನಸಾಮಾನ್ಯರನ್ನು ಒಂದೆಡೆ ಸೇರಿಸಿ, ಪೋಷಕತ್ವದ ಕನಸನ್ನು ಸುಂದರ ವಾಸ್ತವವನ್ನಾಗಿ ಪರಿವರ್ತಿಸುವ ಸಮರ್ಪಣೆಯ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ.
ಈ ಕಾರ್ಯಕ್ರಮದಲ್ಲಿ ಮಗು ಪಡೆಯಲಿಚ್ಛಿಸಿರುವ ದಂಪತಿಗಳು ಆಸ್ಪತ್ರೆಯ ಫಲವತ್ತತೆ ತಜ್ಞರೊಂದಿಗೆ ಉಚಿತ ವೈಯಕ್ತಿಕ ಸಮಾಲೋಚನೆ ನಡೆಸಿ, ತಜ್ಞರ ಮಾರ್ಗದರ್ಶನ ಪಡೆಯಬಹುದು. ತಮ್ಮ ಅನುಮಾನಗಳನ್ನು ಮುಕ್ತವಾಗಿ ಚರ್ಚಿಸಿ ಇತ್ತೀಚಿನ ಫಲವತ್ತತೆ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ಪಡೆಯಲು ಅವಕಾಶವಿದೆ.
ಕ್ಲಿನಿಕಲ್ ಎಂಬ್ರಿಯಾಲಜಿಯನ್ನು (ಭ್ರೂಣಶಾಸ್ತ್ರಜ್ಞ) ವೃತ್ತಿಯನ್ನಾಗಿ ಆಯ್ಕೆಮಾಡಿಕೊಳ್ಳಲು ಆಸಕ್ತಿ ಹೊಂದಿರುವವರು ಅತ್ಯಾಧುನಿಕ ಐವಿಎಫ್ ಪ್ರಯೋಗಾಲಯಕ್ಕೆ ಭೇಟಿ ನೀಡಬಹುದು, ಅನುಭವಿ ಭ್ರೂಣಶಾಸ್ತ್ರಜ್ಞರೊಂದಿಗೆ ಸಂವಾದ ನಡೆಸಬಹುದು, ಆಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಜೀವ ಹೇಗೆ ಸೃಷ್ಟಿಯಾಗುತ್ತದೆ ಎಂಬುದನ್ನು ಕಣ್ಣಾರೆ ನೋಡಬಹುದು ಹಾಗೂ ಆರೋಗ್ಯ ಕ್ಷೇತ್ರದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿನ ವೃತ್ತಿ ಅವಕಾಶಗಳನ್ನು ತಿಳಿಯಬಹುದು.
ಪ್ರತಿಯೊಂದು ಹೊಸ ಆರಂಭದ ಹಿಂದಿರುವ ವಿಜ್ಞಾನವನ್ನು ಸಂಭ್ರಮಿಸಲು ಹಾಗೂ ಜೀವನವು ನಿಜವಾಗಿಯೂ ರೂಪುಗೊಳ್ಳುವ ಈ ಅದ್ಭುತ ಲೋಕವನ್ನು ಸ್ವತಃ ಅನುಭವಿಸಲು ಆಯೋಜಕರು ಸಾರ್ವಜನಿಕರನ್ನು ಈ ಮೂಲಕ ಹೃದಯಪೂರ್ವಕ ಆಹ್ವಾನ ನೀಡಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
