Share this news

ಉಡುಪಿ: ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಕುಡಿಯುವ ನೀರಿನ ಮೂಲಗಳಲ್ಲಿನ ನೀರು ಯಾವುದೇ ರೀತಿಯಲ್ಲಿ ಕಲುಷಿತವಾಗಿರದೇ, ಕುಡಿಯಲು ಯೋಗ್ಯವಾಗಿರುವಂತೆ ಪರಿಶೀಲಿಸಿ, ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್  ಖಡಕ್ ಸೂಚನೆ ನೀಡಿದ್ದಾರೆ.

ಅವರು ಇಂದು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಕುರಿತು ಆಯೋಜಿಸಲಾದ ವೀಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು.
ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಲ್ಲಿ ಆ ನೀರನ್ನು ಸೇವಿಸುವ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಕುಡಿಯುವ ನೀರು ಸರಬರಾಜು ಮೂಲಗಳಲ್ಲಿನ ನೀರನ್ನು ಪರೀಕ್ಷೆಗೆ ಒಳಪಡಿಸುವಂತೆ ಮತ್ತು ಆ ಪ್ರದೇಶದಲ್ಲಿ ಯಾವುದೇ ಕಲುಷಿತ ಪದಾರ್ಥ ಅಥವಾ ನೀರು ಕುಡಿಯುವ ನೀರಿಗೆ ಸೇರ್ಪಡೆಯಾಗದಂತೆ ಎಚ್ಚರವಹಿಸಬೇಕು ಎಂದರು.


ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಲಭ್ಯವಿರುವ ಅನುದಾನದ ಬಳಕೆ ಮಾಡಿಕೊಂಡು ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಂತೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕ್ಲೋರಿನೇಶನ್ ಮಾಡಿಸುವಂತೆ ಮತ್ತು ಎಲ್ಲಾ ಪಂಚಾಯತ್‌ಗಳಲ್ಲಿ ಫಾಗಿಂಗ್ ಮೆಷಿನ್ ಗಳನ್ನು ಶೀಘ್ರದಲ್ಲಿ ಖರೀದಿಸಿ, ಕೀಟ ಜನ್ಯ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್‌ಗಳು ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಕುಡಿಯುವ ನೀರಿನ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದರು.

ಮಕ್ಕಳಲ್ಲಿ ಸಾಂಕ್ರಾಮಿಕ ರೋಗಗಳು, ಅದರಲ್ಲೂ ಡಯಾರಿಯಾ ರೋಗವು ಬೇಗನೇ ಹರಡುವುದರಿಂದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ನೀರು ಶುದ್ಧೀಕರಣ ಫಿಲ್ಟರ್‌ಗಳನ್ನು ಲಭ್ಯವಿರುವ ಅನುದಾನದಲ್ಲಿ ಖರೀದಿಸಿ, ಅಳವಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಾಂಕ್ರಾಮಿಕ ರೋಗಗಳ ಹರಡುವಿಕೆ ಮತ್ತು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಜಿಂಗಲ್ಸ್ ಸಿದ್ಧಪಡಿಸಿ, ಅದನ್ನು ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣಾ ವಾಹನಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸುವಂತೆ ತಿಳಿಸಿದರು.


ಜಿಲ್ಲಾ ಸವೇಕ್ಷಣಾಧಿಕಾರಿ (ಪ್ರಭಾರ) ಡಾ.ವಾಸುದೇವ ಉಪಾಧ್ಯಾಯ, ಶುದ್ದ ಕುಡಿಯುವ ನೀರಿನ ಪ್ರಾಮುಖ್ಯತೆ, ಕಲುಷಿತ ನೀರು ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ಬಗ್ಗೆ ಮತ್ತು ಅವುಗಳನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ವೈಯಕ್ತಿಕ ಶುಚಿತ್ವ ಮತ್ತು ಕೈಗಳ ಶುಚಿತ್ವ ಹಾಗೂ ಕ್ಲೋರಿನೇಷನ್ ವಿಧಾನದ ಬಗ್ಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲೆಯ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯಾಧಿಕಾರಿಗಳು, ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್‌ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವೀಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *