
ಕಾರ್ಕಳ, ಏ.28: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಜಾಗ ಖರೀದಿಸಿದ ಮತ್ತು ಮಾರಾಟ ಮಾಡಿದ ವ್ಯಕ್ತಿಗಳಿಬ್ಬರ ಮಧ್ಯೆ ನಡೆದ ಜಗಳದಲ್ಲಿ ಸ್ಥಳ ಖರೀದಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡ ವ್ಯಕ್ತಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಡಬಿದ್ರೆಯ ಹೆನ್ರಿ ಪಿಂಟೋ(65ವ) ಎಂಬವರು ಕಳೆದ 2008 ರಲ್ಲಿ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಎಮ್‌ಆರ್‌ಪಿಎಲ್ ಪೆಟ್ರೋಲ್ ಬಂಕ್ ಬಳಿ ಮೈಕೆಲ್ ಕುಟಿನ್ಹೋ ಎಂಬುವವರಿಂದ 50 ಸೆಂಟ್ಸ್ ಜಾಗವನ್ನು ಖರೀದಿ ಮಾಡಿದ್ದರು.
ಏ.9 ರಂದು ಬೆಳಗ್ಗೆ ಹೆನ್ರಿ ಪಿಂಟೋ ಆ ಜಾಗಕ್ಕೆ ಹೋಗಿ ಕಸ ಕಡ್ಡಿಗಳಿಗೆ ಬೆಂಕಿ ಹಾಕಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದ ಮೈಕೆಲ್ ಕುಟಿನ್ಹೋ ‘ನಿನಗೆ ಇಲ್ಲಿ ಬೆಂಕಿ ಹಾಕಲು ಯಾರು ಹೇಳಿದ್ದು’ ಎಂದು ಬೈದು ಹೆನ್ರಿ ಪಿಂಟೋ ಕುತ್ತಿಗೆಯ ಹಿಂಬದಿ ಕೈಯಿಂದ ಹೊಡೆದಾಗ ಅವರು ಸ್ಮೃತಿ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಮೈಕೆಲ್ ಕುಟಿನ್ಹೊ ಹೆನ್ರಿ ಪಿಂಟೊ ಅವರ ಸಂಬಂಧಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಬಂದ ಅವರು ಹೆನ್ರಿ ಪಿಂಟೋ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆನ್ರಿ ಅವರ ಎರಡೂ ಕಾಲುಗಳ ಮೀನಖಂಡಗಳಿಗೆ ಸುಟ್ಟ ಗಾಯವಾಗಿದ್ದು, ಮೈಕೆಲ್ ಕುಟಿನ್ಹೊ ಹೊಡೆದು ಸ್ಮೃತಿ ತಪ್ಪಿ ಬಿದ್ದ ನಂತರ ಬೆಂಕಿ ಇರುವ ಕೋಲಿನಿಂದ ಹೊಡೆದ ಕಾರಣ ಕಾಲುಗಳಿಗೆ ಸುಟ್ಟ ಗಾಯಗಳಾಗಿರಬಹುದು ಮತ್ತು ಬೆಂಕಿಯ ಹೊಗೆಯ ಕಾರಣದಿಂದ ಸ್ಮೃತಿ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ಹೆನ್ರಿ ಪಿಂಟೊ ಖರೀದಿ ಮಾಡಿದ ಜಾಗವನ್ನು ವಾಪಾಸು ಕೊಡಬೇಕೆಂದು ಮೈಕೆಲ್ ಕುಟಿನ್ಹೊ ಬೆದರಿಸುತ್ತಿದ್ದು ಅದೇ ಕಾರಣದಿಂದ ಹಲ್ಲೆ ಮಾಡಿದ್ದಾಗ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
