ಕಾರ್ಕಳ: ಸಾಮಾನ್ಯವಾಗಿ ಯಾವುದೇ ಪ್ರಾಣಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸತ್ತುಬಿದ್ದರೆ ಅವುಗಳನ್ನು ಆಯಾ ವ್ಯಾಪ್ತಿಯ ಸ್ಥಳೀಯಾಡಳಿತ ಸಂಸ್ಥೆಗಳು ವಿಲೇವಾರಿ ಮಾಡುತ್ತವೆ. ಆದರೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಎಂಬಲ್ಲಿನ ಜನನಿಬಿಡ ಪ್ರದೇಶದಲ್ಲಿನ ಪ್ರಯಾಣಿಕರ ತಂಗುದಾಣಗೊಳಗೆ ಸತ್ತುಬಿದ್ದಿದ್ದ ನಾಯಿಯ ಕಳೇಬರವನ್ನು ಪಂಚಾಯತ್ ಆಡಳಿತ ವಿಲೇವಾರಿ ಮಾಡುವ ಬದಲು ನಾಯಿ ಕೊಳೆತಿದೆ ಎಂಬ ನೆಪವೊಡ್ಡಿ ನಾಯಿಯ ಶವದ ಮೇಲೆಯೇ ಮಣ್ಣು ಸುರಿದು ಬೇಜವಾಬ್ದಾರಿತನ ಪ್ರದರ್ಶಿಸಿದೆ. ಸ್ವಚ್ಚತೆಯ ಕುರಿತು ಕಾಳಜಿ ವಹಿಸಬೇಕಿದ್ದ ನಂದಳಿಕೆ ಗ್ರಾಮ ಪಂಚಾಯತ್ ಆಡಳಿತದ ಈ ನಡೆಗೆ ಸಾರ್ವಜನಿಕರು ತೀವೃ ಆಕ್ರೋಶ ಹೊರಹಾಕಿದ್ದಾರೆ.
ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಈ ಪ್ರಯಾಣಿಕರ ತಂಗುದಾಣದಲ್ಲಿ ಪ್ರತೀನಿತ್ಯ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಇಲ್ಲಿ ಬಸ್ಸಿಗೆ ಕಾಯುತ್ತಿದ್ದರೂ ಯಾರಿಗೂ ನಾಯಿ ಸತ್ತ ವಿಚಾರ ತಿಳಿಯದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಸಾಮಾನ್ಯವಾಗಿ ಯಾವುದೇ ಪ್ರಾಣಿ ಸತ್ತು ಎರಡು ದಿನಗಳ ಬಳಿಕ ಕೊಳೆತು ವಾಸನೆ ಬರಲು ಶುರುವಾಗುತ್ತದೆ ಆದರೆ ಈ ವಿಚಾರ ಪಂಚಾಯತ್ ಅಡಳಿತದ ಗಮನಕ್ಕೂ ಬರದಿರುವುದು ಸೋಜಿಗದ ಸಂಗತಿಯಾಗಿದೆ.ಕೊನೆಗೂ ಸಾಮಾಜಿಕ ಜಾಲತಾಣಗಳಲ್ಲಿ ಸತ್ತ ನಾಯಿಯ ಶವದ ಮೇಲೆ ಮಣ್ಣು ಸುರಿದ ವಿಚಾರ ವೈರಲ್ ಆಗಿ ನಗಪಾಟಲಿಗೀಡಾದ ಬೆನ್ನಲ್ಲೇ ಪಂಚಾಯತ್ ನ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕಟ್ಟಿದ್ದ ಈ ಪ್ರಯಾಣಿಕರ ತಂಗುದಾಣದಲ್ಲಿ ನಾಯಿ ಸತ್ತು ಒಂದು ವಾರವಾಗಿದ್ದು ಸಣಪೂರ್ಣ ಕೊಳೆತ ಕಾರಣದಿಂದ ವಿಲೇವಾರಿ ಅಸಾಧ್ಯವಾಗಿದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಕೆಮಿಕಲ್ ಸುರಿದು ಮಣ್ಣು ಹಾಕಲಾಗಿದೆ, ಇದನ್ನು ತಕ್ಷಣವೇ ತೆರವುಗೊಳಿಸಲಾಗುತ್ತದೆ ಎಂದು ನಂದಳಿಕೆ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಅಮೀನ್ ಹೇಳಿದ್ದಾರೆ. ಸಾರ್ವಜನಿಕರ ಓಡಾಟದ ಪ್ರದೇಶದಲ್ಲಿ ಸತ್ತುಬಿದ್ದ ನಾಯಿಯ ಶವಕ್ಕೆ ಮುಕ್ತಿ ಕೊಡುವಲ್ಲಿ ಸಾರ್ವಜನಿಕರಾಗಲೀ ಅಥವಾ ಪಂಚಾಯತ್ ಆಡಳಿತವಾಗಲೀ ಮುಂದಾಗಿರುವುದು ನಿಜಕ್ಕೂ ವಿಪಯಾಸವೇ ಸರಿ.