ಬೆಂಗಳೂರು: ಚಂದ್ರಯಾನ-3 ಯೋಜನೆಯ ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿದ್ದ ಲ್ಯಾಂಡರ್ ಹಾಗೂ ರೋವರ್ ಉಪಕರಣಗಳನ್ನು ಇದೀಗ ಮತ್ತೆ 14 ದಿನಗಳ ನಿದ್ರೆಯಿಂದ ಎಚ್ಚರಿಸಲು ಇಸ್ರೋ ಶುಕ್ರವಾರ ಪ್ರಯತ್ನಿಸಲಿದೆ.ಒಂದುವೇಳೆ ಈ ಪ್ರಯತ್ನ ಸಫಲವಾದಲ್ಲಿ ಇನ್ನೂ 14 ದಿನಗಳ ಕಾಲ ಈ ಉಪಕರಣಗಳು ಕಾರ್ಯನಿರ್ವಹಿಸಲಿವೆ.
ಚಂದ್ರಯಾನ – 3 ಉಡ್ಡಯನದ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದು ಅಲ್ಲಿ 12 ದಿನಗಳ ಕಾಲ ಕಾರ್ಯನಿರ್ವಹಿಸಿ ಕತ್ತಲಾದ ಬಳಿಕ ವಿದ್ಯುತ್ ಪೂರೈಕೆ ಸಾಧ್ಯವಾಗದ ಕಾರಣದಿಂದ ನಿದ್ದೆಗೆ ಜಾರಿದ್ದ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಸೆ.22ರಂದು ಇಸ್ರೋ ಕೈಗೊಳ್ಳಲಿದೆ.ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಲಿದ್ದು, ಸೆ.22ರಂದು ಸೂರ್ಯೋದಯವಾಗಲಿದೆ. ಲ್ಯಾಂಡರ್ ಮತ್ತು ರೋವರ್‌ಗಳು ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದರೆ ಇದು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಜ್ಜೆಯಾಗಲಿದೆ. ಅಲ್ಲದೇ ಚಂದ್ರನ ಮೇಲೆ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳಲು ಇದು ನೆರವು ನೀಡಲಿದೆ.
ಚಂದ್ರನ ಮೇಲಿನ 1 ಹಗಲಿನಲ್ಲಿ (ಭೂಮಿಯ 14 ದಿನ) ಕೆಲಸ ಮಾಡಲು ಲ್ಯಾಂಡರ್ ಮತ್ತು ರೋವರ್‌ಗಳನ್ನು ಕಳುಹಿಸಲಾಗಿತ್ತು. ಈ ಉಪಕರಣಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಇವುಗಳನ್ನು 2 ದಿನ ಮೊದಲೇ ಸ್ಲೀಪ್ ಮೋಡ್‌ಗೆ ಹಾಕಲಾಗಿತ್ತು. ಚಂದ್ರನಲ್ಲಿ ಸೂರ್ಯನ ಬೆಳಕು ಇಲ್ಲದ ಸಮಯದಲ್ಲಿ ಉಷ್ಣಾಂಶ ಮೈನಸ್ 240 ಡಿಗ್ರಿವರೆಗೂ ತಲುಪುತ್ತದೆ. ಹಾಗಾಗಿ ಈ ಉಷ್ಣಾಂಶದಲ್ಲಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಉಳಿಯುವುದು ಸಾಹಸವೇ ಆಗಿದೆ. ಹಾಗಾಗಿ ಇಸ್ರೋದ ಈ ಪ್ರಯೋಗದ ಮೇಲೆ ಎಲ್ಲಾ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಕಣ್ಣಿಟ್ಟಿವೆ. ಚಂದ್ರನಲ್ಲಿ ಕತ್ತಲು ಶೀತಮಯವಾಗಿರುತ್ತದೆ. ಅದನ್ನು ಎದುರಿಸಿ ನಿಲ್ಲಲು ಸಾಧ್ಯವಾದರೆ, ಮಿಷನ್ ತನ್ನ ಅದ್ಭುತ ಸಂಶೋಧನೆಗಳನ್ನು ಮತ್ತೆ ಆರಂಭಿಸುವ ಭರವಸೆಯನ್ನು ಇಸ್ರೋ ಹೊಂದಿದೆ. ವಿಕ್ರಮ್ ಮತ್ತು ಪ್ರಜ್ಞಾನ್ ರೋವರ್ ಜತೆಗಿನ ಮರುಸಂಪರ್ಕವು ಯಶಸ್ವಿಯಾದರೆ ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಅದರ ಸ್ಥಿತಿಸ್ಥಾಪಕತ್ವ ಮತ್ತು ತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸುವ ಮೂಲಕ ಇಸ್ರೋಗೆ ಮತ್ತೊಂದು ಸಾಧನೆ ಮಾಡಿದಂತಾಗುತ್ತದೆ.