ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ಪಾನ್ ಪರಾಗ್, ತಂಬಾಕು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ತಿಂದು ಉಗುಳುವುದನ್ನು ನಿಷೇಧಿಸಿ ರಾಜ್ಯ ಸರಕಾರ ಶುಕ್ರವಾರ ಅಧಿಸೂಚನೆ ಹೊರಹೊರಡಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಮತ್ತು ಗುಟ್ಕಾ ಉಗುಳಿದರೆ 1 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ) (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024ಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಮಸೂದೆ ಫೆಬ್ರವರಿ 2024ರಂದು ಉಭಯ ಸದನಗಳಲ್ಲಿ ಅಂಗೀಕಾರವಾಗಿತ್ತು. 2003ರ ಕೇಂದ್ರ ಕಾಯ್ದೆಯನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯಿಸಿ ತಿದ್ದುಪಡಿ ಮಾಡಲಾಗಿದೆ. ಕೇಂದ್ರ ಅಧಿನಿಯಮಕ್ಕೆ ತಿದ್ದುಪಡಿ ತಂದಿರುವುದರಿಂದ ಈ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿ ಕೊಡಲಾಗಿತ್ತು.
ರಾಷ್ಟ್ರಪತಿಗಳ ಅಂಕಿತದ ನಂತರ ಇದೀಗ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇನ್ನು ಮುಂದೆ ರಾಜ್ಯದಲ್ಲಿ 21 ವಯೋಮಿತಿ ಒಳಗಿನ ವ್ಯಕ್ತಿಗಳಿಗೆ ಸಿಗರೇಟು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಪ್ರಸ್ತುತ ತಂಬಾಕು ಉತ್ಪನ್ನಗಳನ್ನು ಖರೀದಿಸುವುದಕ್ಕೆ ಕನಿಷ್ಠ ವಯೋಮಾನ 18 ಇದೆ. ಈಗ ಆ ವಯೋಮಾನವನ್ನು 21 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ, ಬಿಡಿಯಾಗಿ ಅಥವಾ ಒಂಟಿ ಕಡ್ಡಿಯಾಗಿ ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ ಉಗುಳುವುದು, ಸಿಗರೇಟು ಸೇದಿ ನಿಯಮ ಉಲ್ಲಂಘಿಸಿದವರಿಗೆ ದಂಡದ ಪ್ರಮಾಣವನ್ನು 200 ರೂ.ದಿಂದ 1,000 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಹುಕ್ಕಾ ಬಾರ್ ನಡೆಸಿ ನಿಯಮ ಉಲ್ಲಂಘಿಸುವವರಿಗೆ 1 ವರ್ಷದಿಂದ 3 ವರ್ಷ ಜೈಲು ಹಾಗೂ 50 ಸಾವಿರ ರೂಪಾಯಿದಿಂದ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.