ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಕರ್ನಾಟಕ ಮಂಗಳೂರು ಮತ್ತು ಶ್ರೀ ಕೆಎನ್ ಶೆಟ್ಟಿ ಸಂಸ್ಮರಣಾ ಸಮಿತಿ ಆಶ್ರಯದಲ್ಲಿ, ಶ್ರೀ ರಾಮ ಭಜನಾ ಮಂದಿರ ದೇರೆಬೈಲ್ ಕೊಂಚಾಡಿಯಲ್ಲಿ ಯೋಗ ಗುರು ಕೆ.ಎನ್.ಶೆಟ್ಟಿ ಸಂಸ್ಮರಣಾ ದಿನಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ಯೋಗ ಕ್ಷೇತ್ರದಲ್ಲಿ 25 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಎಸ್ ಡಿ ಎಂ ಮಂಗಳ ಜ್ಯೋತಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ರಾಜ್ಯ ಯೋಗ ಸಂಘಟಕ ಹಾಗೂ ಯೋಗ ಸಾಧಕ ಶೇಖರ ಕಡ್ತಲರಿಗೆ ಎಂಟನೇ ವರ್ಷದ ಶ್ರೀ ಕೆ.ಎನ್.ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆ.ಎನ್.ಶೆಟ್ಟಿಯವರು ಮಂಗಳೂರಿನ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಸ್ಥಾಪಕ ಅಧ್ಯಕ್ಷರಾಗಿ ನೂರಾರು ಯೋಗ ಶಿಬಿರ ಹಾಗೂ ಯೋಗ ಸ್ಪರ್ಧೆ ಮುಂತಾದ ಸಂಘಟನೆಗಳನ್ನು ನಡೆಸಿ, ಯೋಗ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು. ಸಾವಿರಾರು ಯೋಗ ಬಂಧುಗಳ ಬದುಕಿಗೆ ಆಶ್ರಯದಾಯಕ ರಾಗಿದ್ದು, ವಿವಿಧ ವಿಶ್ವವಿದ್ಯಾನಿಲಯಗಳ ಮೂಲಕ ಪದವೀಧರ ಯೋಗ ಶಿಕ್ಷಕರನ್ನಾಗಿ ಮಾಡಲು ಶ್ರಮಿಸಿದರು. ಅವರ ಆದರ್ಶ ಬದುಕು, ನಿಸ್ವಾರ್ಥ ಸಮಾಜ ಸೇವೆ, ಯೋಗದ ಬಗೆಗಿನ ಕಳಕಳಿ, ಸಂಘಟನಾ ಮನೋಭಾವ,ಸರಳತೆ ಇಂದಿನ ಜನತೆಗೆ ಅನುಕರಣೀಯ ಎಂದು ಆವಿಷ್ಕಾರ ಯೋಗ ಕೇಂದ್ರದ ಯೋಗ ಗುರು ಕುಶಲಪ್ಪ ಗೌಡ ನುಡಿ ನಮನ ಸಲ್ಲಿಸಿದರು.
ಆಧುನಿಕ ಜೀವನದ ಭರಾಟೆಯಲ್ಲಿ ನಮ್ಮ ಆರೋಗ್ಯವನ್ನು ಕಳೆದುಕೊಳ್ಳದೆ ನಿತ್ಯ ಯೋಗಾಭ್ಯಾಸ ಜೊತೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರವನ್ನು ಅಳವಡಿಸಿಕೊಂಡು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ಆಗಬೇಕು ಎಂದು ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ ಹೇಳಿದರು. ಯೋಗ ಪ್ರತಿಷ್ಠಾನದ ಅಧ್ಯಕ್ಷರಾದ ಏಕನಾಥ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರತಿಷ್ಠಾನದ ಸಂಚಾಲಕಿ ಭಾರತಿ ಶೆಟ್ಟಿ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಯೋಗೀಶ ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಧನಂಜಯ ಕೆ ಸ್ವಾಗತಿಸಿ,ಪ್ರಭಾ ಚಂದ್ರಶೇಖರ್ ಧನ್ಯವಾದ ಸಲ್ಲಿಸಿದರು. ಅಶೋಕ್ ಕಾರ್ಯಕ್ರಮ ನಿರೂಪಿಸಿದರು.
K