ಕಾರ್ಕಳ: ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರೂ 1.80 ಕೋಟಿ ಅನುದಾನ ಮಂಜೂರಾಗಿದೆ.
ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಜೆ ಗ್ರಾಮದ ದೊಂಡೇರಂಗಡಿಯಲ್ಲಿ ನೂತನ ಶ್ರೀರಾಮ ಸಭಾಭವನ ನಿರ್ಮಾಣ ಕಾಮಗಾರಿಗೆ ರೂ 25 ಲಕ್ಷ ಅನುದಾನ, ಹೆಬ್ರಿ ಸುಸಜ್ಜಿತ ಬಸ್ಸು ನಿಲ್ದಾಣ ಕಾಮಗಾರಿಗೆ ರೂ 50 ಲಕ್ಷ ಅನುದಾನ, ಕಾರ್ಕಳ ಪರಶುರಾಮ ಥೀಂ ಪಾರ್ಕ್ ಕಾಮಗಾರಿಗೆ ರೂ 50 ಲಕ್ಷ ಅನುದಾನ, ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕ್ರೀಡಾಂಗಣದ ಸಭಾವೇದಿಕೆ ಕಾಮಗಾರಿಗೆ ರೂ 25 ಲಕ್ಷ ಅನುದಾನ ಮತ್ತು ಬಜಗೋಳಿ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿಗೆ ರೂ 30 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ಸಮುದಾಯಗಳ ನೂತನ ಸಮುದಾಯ ಭವನ ನಿರ್ಮಾಣ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕೇಂದ್ರಗಳ ಸಭಾಭವನ ನಿರ್ಮಾಣ ಸೇರಿದಂತೆ ಧಾರ್ಮಿಕ ಆಚರಣೆಗಳ ಪೂರಕ ಚಟುವಟಿಕೆಗಳಿಗೆ ವಿಶೇಷ ಅನುದಾನಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.