ಬೆಂಗಳೂರು :ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಬ್ರಾಹ್ಮಣರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಿ, 8 ಜನರನ್ನು ಉಪಮುಖ್ಯಮಂತ್ರಿ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ಹೇಳಿದರು.
ದೆಹಲಿಯಲ್ಲಿ ಆರೆಸ್ಸೆಸ್ ಮುಖಂಡರ ಸಭೆ ನಡೆದಿದ್ದು, ಸಭೆಯಲ್ಲಿ ಮುಂದಿನ ಸಿಎಂ ಬಗ್ಗೆ ನಿರ್ಧರಿಸಲಾಗಿದ್ದು, ಪ್ರಹ್ಲಾದ್ ಜೋಶಿ ಅವರೇ ಮುಂದಿನ ಮುಖ್ಯಮಂತ್ರಿ ಆಗ್ತಾರೆ. ಕರ್ನಾಟಕದ ಜನರು ಆರೆಸ್ಸೆಸ್, ಬಿಜೆಪಿ ಕಳ್ಳಾಟಕ್ಕೆ ಬಲಿಯಾಗಬೇಡಿ. ಆರೆಸ್ಸೆಸ್ ನವರು ನಿರ್ಧಾರ ಮಾಡಿರುವ ಬ್ರಾಹ್ಮಣ ಸಿಎಂ ನಮ್ಮ ಹಳೇ ಕರ್ನಾಟಕದ ಬ್ರಾಹ್ಮಣರಲ್ಲ. ಮಹಾರಾಷ್ಟ್ರ ಭಾಗದ ಪೇಶ್ವೇಗಳು, ಶೃಂಗೇರಿ ಮಠ ಒಡೆದವರ ಭಾಗದ ಬ್ರಾಹ್ಮಣರ ಗುಂಪಿಗೆ ಸೇರಿದವರು ಎನ್ನುವ ಮೂಲಕ ಹೆಚ್‌ಡಿಕೆ ಹೊಸ ವಿವಾದ ಸೃಷ್ಟಿಸಿದ್ದಾರೆ.