ಬೆಂಗಳೂರು: ಉದ್ಯಮಿ ಹಾಗೂ ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರು ಐದು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಕುರಿತಂತೆ ಪ್ರಮುಖ ಆರೋಪಿ ಆಗಿರುವಂತಹ ಚೈತ್ರ ಕುಂದಾಪುರ ಸಿಸಿಬಿ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ವಿಚಾರಣೆ ವೇಳೆ ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ, ಮೊಬೈಲ್ ಕರೆಗಳು ಹಾಗೂ ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್, ಠೇವಣಿ, ಜಪ್ತಿ ಮಾಡಿದ್ದ ಕಾರು ಸೇರಿ ದಾಖಲೆಗಳನ್ನು ಮುಂದಿಟ್ಟು ಸಿಸಿಬಿ ಪ್ರಶ್ನೆ ಕೇಳಿದೆ. ಈ ವೇಳೆ ದಾಖಲೆ ಕಂಡು ಬೆಚ್ಚಿಬಿದ್ದ ಚೈತ್ರಾ ಬೇರೆ ದಾರಿಯಿಲ್ಲದೇ ಎಲ್ಲವನ್ನು ಬಾಯಿಬಿಟ್ಟಿದ್ದಾಳೆ. ತಾನು ದಿಢೀರ್ ಹಣ ಮಾಡುವ ದೇಶದಿಂದ ಕೃತ್ಯ ಮಾಡಿದ್ದಾಗಿ ತಪ್ಪಕೊಂಡಿದ್ದಾಳೆ. ಅದಕ್ಕಾಗಿ ಪರಿಚಿತರೊಬ್ಬರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನೆಲೆಗೆ ತರುತ್ತೇನೆ ಎಂದು ನಂಬಿಸಿ ಟಿಕೆಟ್ ನಮಗೆ ಬರುವಂತಹ ಸನ್ನಿವೇಶ ಸೃಷ್ಟಿಸುವುದಾಗಿ ಹೇಳಿದ್ದಾಳೆ. ನಂತರ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತ ಪ್ಲಾನ್ ಮಾಡಿದ್ದಳು ಎಂದು ಹೇಳಿದ್ದಾಳೆ.

ಒಂದು ವೇಳೆ ಗೋವಿಂದ ಪೂಜಾರಿಗೆ ಟಿಕೆಟ್ ಕೈತಪ್ಪಿದರೂ ಏನು ಮಾಡಬೇಕು ಎಂದು ಚೈತ್ರಾ ಮತ್ತು ಗ್ಯಾಂಗ್ ಪ್ಲಾನ್ ರೂಪಿಸಿದ್ದರು. ಒಂದು ವೇಳೆ ಟಿಕೆಟ್ ಮಿಸ್ ಆದರೆ ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ ಜೀ ಅವರಿಗೆ ಕೊಟ್ಟಿದ್ದಾಗಿ ಗೋವಿಂದ ಬಾಬುಗೆ ಹೇಳಿದ್ದಾರೆ.ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಎರಡನೇ ಪ್ಲಾನ್ ಆಗಿತ್ತು.

ಒಂದು ವೇಳೆ ನಂಬದಿದ್ದರೆ ವಿಶ್ವನಾಥ್ ಜಿ ಮೃತಪಟ್ಟಿದ್ದಾರೆ. ನಮಗೆ ಗೊತ್ತೇ ಇಲ್ಲ ಎಂದು ಗೋವಿಂದ ಬಾಬು ಬಳಿ ಹೇಳುವುದಾಗಿ ಪ್ಲಾನ್ ಮಾಡಿದ್ದರು. ಅದರಂತೆ ಗೋವಿಂದ ಬಾಬು ಅವರಿಂದ ಚೈತ್ರಾ ಮತ್ತು ಆಕೆಯ ಗ್ಯಾಂಗ್ 3.50 ಕೋಟಿ ಪಡೆದಿತ್ತು ಎನ್ನಲಾಗಿದೆ.ಈ ಎಲ್ಲಾ ವಿಚಾರವನ್ನು ಸಿಸಿಬಿ ಮುಂದೆ ಚೈತ್ರಾ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.
ಒಟ್ಟಿನಲ್ಲಿ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



