ಕಾರ್ಕಳ: ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳಿಗಾಗಿ ಆರ್ಥಿಕ ಸಂಪನ್ಮೂಲಗ ಸಂಗ್ರಹಕ್ಕಾಗಿ ಗಲ್ಲಿಗಲ್ಲಿಗಳಲ್ಲಿ ಮದ್ಯದಂಗಡಿ ತೆರೆಯುವ ಮೂಲಕ ಯುವಜನರಿಗೆ ಆಲ್ಕೋಹಾಲ್ ರುಚಿ ತೋರಿಸಿ ದಾರಿತಪ್ಪಿಸಲಾಗುತ್ತಿದೆ ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಆರೋಪಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಮಾರಾಟ ಮಳಿಗೆ ತೆರೆಯಲು ಉದ್ದೇಶಿಸಿರುವ ಸರ್ಕಾರ ನಡೆ ಹೈನುಗಾರಿಕೆ ನಡೆಸುವ ಬಡ ಕುಟುಂಬಗಳ ಬದುಕಿಗೆ ಬರೆ ಎಳೆಯಲು ಮುಂದಾಗಿದ್ದು, ಹಾಲಿನ ಬದಲು ಆಲ್ಕೊಹಾಲಿಗೆ ಉತ್ತೇಜನ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬರಗಾಲದಿಂದ ಪಶುಗಳಿಗೆ ಮೇವಿನ ಕೊರತೆ,ಪಶು ಆಹಾರದ ದರ ಏರಿಕೆ, ಸಣ್ಣ ಹಿಡುವಳಿದಾರ ರೈತರಿಗೆ ಹಸಿರುಮೇವು ಬೆಳೆಸಲು ಜಾಗದ ಕೊರತೆ, ವಿದ್ಯುತ್ ದರ ಕೂಲಿಯಾಳುಗಳ ಸಂಬಳದಲ್ಲಿ ಏರಿಕೆ, ಪಶು ವೈದ್ಯರ ಕೊರತೆ, ಔಷಧಿ ಮತ್ತು ಚಿಕಿತ್ಸಾದರದಲ್ಲಿ ಏರಿಕೆ ಮುಂತಾದ ಹಲವಾರು ಸಮಸ್ಯೆಗಳಿಂದ ನಲುಗುತ್ತಿರುವ ಹೈನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾದ ಯೋಜನೆ ಮತ್ತು ಅನುದಾನಗಳನ್ನು ನೀಡಲು ಸರಕಾರವು ಗಮನ ಹರಿಸದೇ ಜನರ ದುಡಿಮೆಯ ಹಣವನ್ನು ಮದ್ಯದಂಗಡಿಗಳ ಕಡೆಗೆ ಸೆಳೆಯಲು ಯೋಜನೆ ರೂಪಿಸುತ್ತಿರುವುದು ವಿಪರ್ಯಾಸಕರ ಎಂದಿದ್ದಾರೆ.
ಇದಲ್ಲದೇರಾಜ್ಯದಲ್ಲಿ ಒಂದೆಡೆ ಸರಕಾರ ಮದ್ಯದ ಹೊಳೆಯನ್ನು ಹರಿಸಲು ಮುಂದಾದರೆ, ಇನ್ನೊಂದೆಡೆ ಹೈನುಗಾರಿಕಾ ಕ್ಷೇತ್ರದ ಕಡೆಗಣನೆಯಿಂದಾಗಿ ಹಾಲಿನ ತೀವೃ ಅಭಾವ ಸೃಷ್ಟಿಯಾಗುವ ಸಾಧ್ಯತೆ ಎದುರಾಗಬಹುದೆಂದು ಎಚ್ಚರಿಸಿದ್ದಾರೆ.
ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ಸಾವಿರಾರು ಎಕರೆ ಗೋಮಾಳ ಭೂಮಿ ಲಭ್ಯವಿದ್ದು, ಜಿಲ್ಲಾಧಿಕಾರಿಗಳ ಮೂಲಕ ಹೈನುಗಾರರಿಗೆ ಹಸಿರುಮೇವು ಬೆಳೆಸಲು ಈ ಭೂಮಿಯನ್ನು ಒದಗಿಸಿದರೆ, ಹಸಿರು ಮೇವನ್ನು ಬೆಳೆಸುವುದರ ಮೂಲಕ ಮೇವಿನ ಕೊರತೆಯನ್ನು ನೀಗಿಸಿ ಹೈನುಗಾರಿಕೆಗೆ ಪ್ರೋತ್ಸಾಹವನ್ನು ನೀಡಿದಂತಾಗುವುದು ಎಂದು ನರಸಿಂಹ ಕಾಮತ್ ರವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.














