ಜೆರುಸಲೇಮ್:ಕಳೆದ 7 ವರ್ಷಗಳಿಂದ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮಹಿಳೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತಾಡುವ ವೇಳೆಯೇ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಪತ್ನಿ ಮಾತನಾಡುವ ಸಂದರ್ಭದಲ್ಲಿ ಏಕಾಎಕಿ ಭೀಕರ ಸ್ಫೋಟ, ಗುಂಡಿನ ಶಬ್ದ ಭಾರತದಲ್ಲಿರುವ ಪತಿಗೆ ಕೇಳಿಸಿದೆ. ಕಲವೇ ಕ್ಷಣದಲ್ಲಿ ಪತ್ನಿಯ ಫೋನ್ ಸಂಪರ್ಕ ಕಡಿದುಕೊಂಡಿದೆ.ಇಂತಹ ಭಯಾನಕ ಘಟನೆಯ ಚಿತ್ರಣವನ್ನು ಮಹಿಳೆಯ ಕುಟುಂಬಸ್ಥರು ನೋವಿನಿಂದಲೇ ಹಂಚಿಕೊಂಡಿದ್ದಾರೆ.
41 ವರ್ಷದ ಶೀಜಾ ಇಸ್ರೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದರೆ, ಶೀಜಾರ ಪತಿ ಆನಂದ್ ಹಾಗೂ ಮಕ್ಕಳು ಕೇರಳದಲ್ಲಿ ನೆಲಸಿದ್ದಾರೆ. ಶನಿವಾರ ಬೆಳಗ್ಗೆ ಇಸ್ರೇಲ್ ಮೇಲೆ ಏಕಾಏಕಿ ಹಮಾಸ್ ಉಗ್ರರ ದಾಳಿಯಾಗಿದೆ. ಇಸ್ರೇಲ್ನ ಹಲವು ಭಾಗಕ್ಕೆ ಹಮಾಸ್ ಉಗ್ರರು ನುಗ್ಗಿ ಮಹಿಳೆ, ಮಕ್ಕಳು ಸೇರಿದಂತೆ ನಾಗರೀಕರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಬೆತ್ತಲೇ ಮರೆವಣಿಗೆ ಮಾಡಿದ್ದಾರೆ. ಶವಗಳ ಪರೇಡ್ ಮಾಡಿದ್ದಾರೆ. ಈ ವೇಳೆ ಕುಟುಂಬಕ್ಕೆ ಕರೆ ಮಾಡಿದ ಶೀಜಾ ಆನಂದ್ ತಾನು ಸುರಕ್ಷಿತವಾಗಿರುವಾದಾಗಿ ತಿಳಿಸಿದ್ದಾರೆ.ಕೆಲ ಹೊತ್ತಲ್ಲೇ ಶೀಜಾ ಮತ್ತೆ ಪತಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಅಕ್ಕ ಪಕ್ಕದಲ್ಲಿ ಹಮಾಸ್ ಉಗ್ರರು ದಾಳಿ ಮಾಡಿದ್ದಾರೆ ಎಂದು ಶೀಜಾ ಹೇಳುತ್ತಿರುವಾಗಲೇ ಬಾಂಬ್ ಸ್ಫೋಟ, ಗುಂಡಿನ ಶಬ್ದಗಳು ಕೇಳಿಸತೊಡಗಿದೆ. ಇತ್ತ ಶೀಜಾ ಆನಂದ್ ಫೋನ್ ದೂರಕ್ಕೆ ಚಿಮ್ಮುತ್ತಿರುವ ದೃಶ್ಯ ಕಾಣಿಸಿದ ತಕ್ಷಣವೇ ಸಂಪರ್ಕ ಕಡಿತಗೊಂಡಿದೆ. ಪತ್ನಿಗೆ ಏನಾಗಿದೆ ಎನ್ನುವ ಯಾವುದೇ ಸುಳಿವು ಕೂಡ ಕುಟುಂಬಕ್ಕೆ ಸಿಗಲಿಲ್ಲ. ಶೀಜಾ ಫೋನ್ ಸ್ವಿಚ್ ಆಫ್ ಆಗಿದೆ. ಇತರರನ್ನು ಸಂಪರ್ಕಿಸಲು ಸಾಧ್ಯವಾಗದೇ ಭಾನುವಾರ ರಾತ್ರಿಯಿಡೀ ಕುಟುಂಬ ಪರದಾಡಿದೆ.ಕೊನೆಗೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಶೀಜಾ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲವರಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಸಂಪರ್ಕಕ್ಕೆ ಸಿಗಲಿಲ್ಲ. ದಿನವಿಡೀ ಆತಂಕದಲ್ಲೇ ಕಳೆದಿದ್ದಾರೆ.
ಮರುದಿನ ಶೀಜಾ ಸಹದ್ಯೋಗಿಗಳು ಕರೆ ಮಾಡಿದ್ದಾರೆ. ಹಮಾಸ್ ಉಗ್ರರ ದಾಳಿ ವೇಳೆ ಶೀಜಾ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಜಾಗೆ ಸರ್ಜರಿ ಅಗತ್ಯವಿರುವ ಕಾರಣ ಬೇರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೈ, ಕಾಲು ಹಾಗೂ ಬೆನ್ನು ಮೂಳೆ ಮುರಿತಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಆಸ್ಪತ್ರೆ ಬೆಡ್ ಮೇಲಿನಿಂದಲೇ ಸಹದ್ಯೋಗಿಗಳು ಫೋನ್ ಮೂಲಕ ಕುಟುಂಬಸ್ಥರ ಜೊತೆ ಮಾತನಾಡಿದ ಶೀಜಾ, ನಾನು ಕ್ಷೇಮವಾಗಿದ್ದೇನೆ, ದಾಳಿ ವೇಳೆ ಗಾಯವಾಗಿದೆ ಎಂದಿದ್ದಾರೆ.ಇದರಿಂದ ಆಕೆಯ ಕುಟುಂಬ ನಿಟ್ಟುಸಿರು ಬಿಟ್ಟಿದೆ.