

ನವದೆಹಲಿ,ಅ.04: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶನಿವಾರ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ವಿಮಾನವನ್ನು ಅಪಘಾತಕ್ಕೀಡು ಮಾಡಲು ಸಹ-ಪೈಲಟ್ ನಡೆಸಿದ್ದ ಯತ್ನವನ್ನು ವಿಫಲಗೊಳಿಸಿದ ಅವರನ್ನು ‘ಜಗತ್ತಿನ ಹೀರೋ’ ಎಂದು ಬಣ್ಣಿಸಿದ್ದಾರೆ.
ಸಧ್ಯ UAE ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 38 ವರ್ಷದ ಪೈಲಟ್ ಸ್ಮಿತ್ ಮಚ್ಛರ್ ಅವರೊಂದಿಗೆ ಮಾತನಾಡಿದ ನೆತನ್ಯಾಹು, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯಂದು ದೀಪ ಬೆಳಗಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಮಿತ್ ಮಚ್ಛರ್ ಅವರನ್ನು ಆಹ್ವಾನಿಸಿದ್ದಾರೆ. “ಇದು ನಮ್ಮ ಸ್ವಾತಂತ್ರ್ಯ ದಿನಾಚರಣೆಯಂದು ನಾವು ನೀಡುವ ಅತ್ಯುನ್ನತ ಗೌರವವಾಗಿದೆ. ಸಾಮಾನ್ಯವಾಗಿ ಇದನ್ನು ಇಸ್ರೇಲ್ ನಾಗರಿಕರಿಗೆ ಮಾತ್ರ ಮೀಸಲಿಡಲಾಗಿದೆ. ಆದರೆ ಈ ಸಂದರ್ಭದಲ್ಲಿ ಇಸ್ರೇಲ್‌ನ ಎಲ್ಲಾ ನಾಗರಿಕರು ನಿಮ್ಮನ್ನು ಅಪ್ಪಿಕೊಳ್ಳುತ್ತಾರೆ. ನಾವು ನಿಮ್ಮನ್ನು ಬಹಳ ಬೇಗ ಇಸ್ರೇಲ್‌ನಲ್ಲಿ ನೋಡಲು ಎದುರು ನೋಡುತ್ತಿದ್ದೇವೆ” ಎಂದು ನೆತನ್ಯಾಹು ತಿಳಿಸಿದ್ದಾರೆ.
ಬುಧವಾರ ಸಂಭವಿಸಿದ ಈ ಘಟನೆಯಲ್ಲಿ, ಫ್ಲೈದುಬೈ FZ1073 ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾಗ ಸ್ಮಿತ್ ಮಚ್ಛರ್ ಮೇಲೆ ಅವರ ಸಹ-ಪೈಲಟ್ ತುರ್ತು ಸಂದರ್ಭಗಳಲ್ಲಿ ಬಳಸುವ ಕ್ರ್ಯಾಶ್ ಆಕ್ಸ್ ನಿಂದ ಹಲ್ಲೆ ನಡೆಸಿದ್ದನು. ಇದರಿಂದ ಅವರಿಗೆ ತೀವ್ರ ಗಾಯಗಳಾಗಿದ್ದವು. 174 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಏಕಾಎಕಿ 34 ಸಾವಿರ ಅಡಿ ಎತ್ತರದಿಂದ 17ಸಾವಿರ ಅಡಿಗಳಿಗೂ ಹೆಚ್ಚು ಕೆಳಗೆ ಇಳಿದಿತ್ತು.
ನೆತನ್ಯಾಹು ಜತೆಗಿನ ಸಂಭಾಷಣೆಯಲ್ಲಿ ಮಾತನಾಡಿದ ಮಚ್ಛರ್, ಹಲ್ಲೆ ನಡೆಯುವ ಮುನ್ನ ಸಹ-ಪೈಲಟ್ ಪ್ರಾರ್ಥನೆ ಮಾಡಲು ಬಯಸಿದ್ದಾಗಿ ತಿಳಿಸಿದರು. “…ಅವರು ಪ್ರಾರ್ಥನೆ ಮಾಡುತ್ತಿದ್ದಾಗ, ಗೌರವದಿಂದ ನಾನು ಮುಂದೆ ನೋಡುತ್ತಿದ್ದೆ ಮತ್ತು ಇದ್ದಕ್ಕಿದ್ದಂತೆ ನನ್ನ ತಲೆಯ ಹಿಂಭಾಗಕ್ಕೆ ದೊಡ್ಡ ಏಟು ಬಿತ್ತು. ವಿಮಾನಕ್ಕೆ ತೀವ್ರ ಹಾನಿಯಾಗಿದೆ ಎಂದು ನಾನು ಮೊದಲಿಗೆ ಭಾವಿಸಿದೆ, ಆದರೆ ನಂತರ ಒಂದರಂತೆ ಏಟುಗಳು ಬೀಳುತ್ತಲೇ ಇದ್ದವು, ಆಗ ಕಾಕ್‌ಪಿಟ್‌ನಲ್ಲಿದ್ದ ಇನ್ನೊಬ್ಬ ವ್ಯಕ್ತಿಯೇ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ ಎಂಬುದು ನನಗೆ ತಿಳಿಯಿತು ಎಂದು ಮಚ್ಛರ್ ವಿವರಿಸಿದ್ದಾರೆ.
ನಿಮ್ಮ ಧೈರ್ಯ ಹಾಗೂ ಅಸಾಧ್ಯ ಪರಿಸ್ಥಿತಿಯಲ್ಲೂ ನೀವು ತೋರಿದ ಸಂಯಮವು ನನಗೆ ಅಚ್ಚರಿ ಮೂಡಿಸಿದೆ ಎಂದು ನೆತನ್ಯಾಹು ಮಚ್ಛರ್ ಅವರನ್ನು ಕೊಂಡಾಡಿದ್ದಾರೆ. “ನೀವು ಅಷ್ಟು ಜನರ ಪ್ರಾಣಗಳನ್ನು ಉಳಿಸಿದ್ದೀರಿ. ಜಗತ್ತಿನ ಸ್ಪೂರ್ತಿಯನ್ನು ಉಳಿಸಿದ್ದೀರಿ. ನೀವು ಇಸ್ರೇಲ್‌ನ ಹೀರೋ, ಭಾರತದ ಹೀರೋ ಮತ್ತು ಇಡೀ ಜಾಗತಿಕ ಹೀರೋ” ಎಂದು ಪ್ರಧಾನಿ ನೆತನ್ಯಾಹು ಶ್ಲಾಘಿಸಿದ್ದಾರೆ.
ಈ ಭೀಕರ ಘಟನೆಯ ನಡುವೆ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಕೊನೆಗೂ ವಿಮಾನವು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತ್ತು.





.
.
.
.
.
.
.
.
.
.
.
.
.
.
.
.
.
.
.
.
