ಶಿರ್ವ: ಕಳೆದ ಒಂದು ವಾರದ ಹಿಂದೆ ಮೂಡುಬೆಳ್ಳೆಯ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಶವ ಪಾಪನಾಶಿನಿ ಹೊಳೆಯಲ್ಲಿ ಅ.13 ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ಸದಾಶಿವ ಪೂಜಾರಿ ಎಂಬವರ ಪುತ್ರಿ ವಿನಿತಾ (22)ಕಳೆದ ಅಕ್ಟೋಬರ್ 9ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಮನೆಯಿಂದ ಪೇಟೆಗೆ ಹೋದವಳು ಕಾಣೆಯಾದ ಕುರಿತು ಆಕೆಯ ಪೋಷಕರು ಶಿರ್ವ ಠಾಣೆಗೆ ದೂರು ನೀಡಿದ್ದರು.ಪೊಲೀಸರು ಹಾಗೂ ಆಕೆಯ ಸಂಬಂಧಿಕರು ಸಾಕಷ್ಟು ಹುಡುಕಾಟ ನಡೆಸಿದರೂ ವಿನಿತಾ ಪತ್ತೆಯಾಗಿರಲಿಲ್ಲ.
ಈಕೆ ನಾಪತ್ತೆಯಾಗಿ 5 ದಿನಗಳ ಬಳಿಕ ಆಕೆಯ ಶವ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಸೇತುವೆಯ ಬಳಿ ಪಾಪನಾಶಿನಿ ಹೊಳೆಯಲ್ಲಿ ಪತ್ತೆಯಾಗಿದೆ.
ಬಿ.ಕಾಂ ಪದವೀಧರೆಯಾಗಿದ್ದ ವಿನಿತಾ ಉಡುಪಿ ಎಂಜಿಎಂ ಕಾಲೇಜು ಬಳಿಯ ಎಲೆಕ್ಟ್ರಿಕಲ್ ಬೈಕ್ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು,ಕಳೆದ ವಾರದ ಹಿಂದೆ ಕೆಲಸಬಿಟ್ಟಿದ್ದರು. ಮಾನಸಿಕವಾಗಿ ನೊಂದಿದ್ದ ಈಕೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿರಬೇಕೆಂದು ಶಂಕಿಸಲಾಗಿದೆ
ಮಲ್ಪೆಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಶವವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.
ಶಿರ್ವ ಪೊಲೀಸ್ ಠಾಣಾಧಿಕಾರಿ ಸಕ್ತಿವೇಲು ಮತ್ತು ಕ್ರೈಂ ವಿಭಾಗದ ಪಿಎಸ್‌ಐ ಅನಿಲ್ ಕುಮಾರ್ ಘಟನಾಸ್ಥಳಕ್ಕೆ ಭೇಟಿ ನೀಡಿದ್ದಾರೆ














