ಟೆಲ್ ಅವಿವ್(ಇಸ್ರೇಲ್):ಪ್ಯಾಲಸ್ತೀನಿನ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಯುದ್ಧ ಸಾರಿದ ಬಳಿಕ ಮೊದಲಬಾರಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತನ್ನ ಪರಮಮಿತ್ರ ದೇಶವಾದದ ಇಸ್ರೇಲ್‌ಗೆ ಆಗಮಿಸಿದ್ದಾರೆ. ಮಾತ್ರವಲ್ಲದೇ ಯುದ್ಧದಲ್ಲಿ ಇಸ್ರೇಲ್‌ಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಇದೇ ವೇಳೆ, ಗಾಜಾ ಪಟ್ಟಿಯಲ್ಲಿ ಮಂಗಳವಾರ ಆಸ್ಪತ್ರೆಯೊಂದರ ಮೇಲೆ ನಡೆದ ವಾಯುದಾಳಿಯಲ್ಲಿ 800ಕ್ಕೂ ಹೆಚ್ಚು ಜನರು ಮೃತರಾದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಜೋ ಬೈಡೆನ್, ಈ ಹೇಯ ಕೃತ್ಯಕ್ಕೆ ಹಮಾಸ್ ನೇರ ಹೊಣೆಯಾಗಿದೆ, ಇದು ಉಗ್ರರ ದಾಳಿಯಾಗಿದ್ದು, ಹಮಾಸ್ ಉಗ್ರರು ಇಡೀ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿಸಿದ್ದಾರೆ, ಉಗ್ರರನ್ನು ಬೇರುಸಹಿತ ಕಿತ್ತೊಗೆಯಲು ಇಸ್ರೇಲ್ ಗೆ ಎಲ್ಲಾ ಸೇನಾನೆರವು ನೀಡಲಾಗುತ್ತದೆ ಎಂದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೈಡೆನ್,ನಾನು ಇಸ್ರೇಲ್ ಜನರ ಜತೆಗೆ ಇರುತ್ತೇನೆ. ಹಮಾಸ್ ದೌರ್ಜನ್ಯ ಎಲ್ಲೆ ಮೀರಿದೆ. ಹಮಾಸ್ ಉಗ್ರರು ಎಸಗುತ್ತಿರುವ ದುಷ್ಕೃತ್ಯಗಳು ಐಸಿಸ್ ಗಿಂತಲೂ ಭೀಕರವಾಗಿದೆ. ಹಮಾಸ್ ಎಲ್ಲಾ ಪ್ಯಾಲೆಸ್ತೀನ್ ಜನರನ್ನು ಪ್ರತಿನಿಧಿಸುವುದಿಲ್ಲ. ಉಗ್ರರ ನಡೆ ಪ್ಯಾಲೆಸ್ತೀನೀಯರ ಕಷ್ಟ ಇಮ್ಮಡಿಸಿದೆ ಎಂದು ಕಿಡಿಕಾರಿದರು.ಅಲ್ಲದೆ,ನಿನ್ನೆ ಗಾಜಾದ ಆಸ್ಪತ್ರೆಯಲ್ಲಿ ನಡೆದ ಸ್ಫೋಟದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಮತ್ತು ಆಕ್ರೋಶಗೊಂಡಿದ್ದೇನೆ. ನಾನು ಗಮನಿಸಿದ ಪ್ರಕಾರ ಆಸ್ಪತ್ರೆ ಮೇಲೆ ದಾಳಿಯನ್ನು ಇನ್ನೊಂದು ತಂಡ ನಡೆಸಿದೆಯೇ ಹೊರತು ಈ ದಾಳಿ ಇಸ್ರೇಲ್ ಪಾತ್ರವಿಲ್ಲ ಎಂದು ಕ್ಲೀನ್‌ಚಿಟ್ ನೀಡಿದ್ದಾರೆ.
ಈ ಮುನ್ನ ಇಸ್ರೇಲ್‌ಗೆ ಅಮೆರಿಕ ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಭೇಟಿ ನೀಡಿ ಬೆಂಬಲ ಪ್ರಕಟಿಸಿದ್ದರು. ಆದರೆ ಇಸ್ರೇಲ್‌ಗೆ ಅಮೆರಿಕ ಪರಮ ಮಿತ್ರ ಆಗಿರುವ ಕಾರಣ ಖುದ್ದು ಬೈಡೆನ್ ಅವರೇ ಬಂದಿದ್ದಾರೆ. ಈ ಮುಂಚೆ ತನ್ನ ನೌಕಾಪಡೆಯನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಅಮೆರಿಕ ಕಳಿಸಿಕೊಟ್ಟು, ಇಸ್ರೇಲ್‌ಗೆ ಬೆಂಬಲವಾಗಿ ನಿಲ್ಲುವುದಾಗಿ ಘೋಷಿಸಿತ್ತು. ಮತ್ತೊಂದೆಡೆ ಅಮೆರಿಕಾ ಮಧ್ಯ ಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡ ಹೊತ್ತಲ್ಲೇ ಹಮಾಸ್ ಮತ್ತು ಇತರೆ ಕೆಲ ದೇಶಗಳಲ್ಲಿನ ಉಗ್ರ ಸಂಘಟನೆಗಳು ಮತ್ತು ಕೆಲ ವ್ಯಕ್ತಿಗಳ ವಿರುದ್ಧ ನಿರ್ಬಂಧ ಹೇರಿದೆ. ಹಮಾಸ್ ಉಗ್ರ ಸಂಘಟನೆಗೆ ಇರುವ ಎಲ್ಲ ಹಣದ ಜಾಲವನ್ನು ನಾವು ನಿರ್ಬಂಧಿಸಲು ಕ್ರಮ ಕೈಗೊಳ್ಲುತ್ತಿದ್ದೇವೆ. ಇವರಿಗೆ ಮಧ್ಯಪ್ರಾಚ್ಯ ದೇಶಗಳಾದ ಇರಾನ್, ಟರ್ಕಿ, ಸೂಡಾನ್ ಮುಂತಾದ ದೇಶಗಳಿಂದ ಹಣದ ಹರಿವು ಆಗುತ್ತಿದೆ ಎಂಬ ಮಾಹಿತಿಯಿದ್ದು, ಅದನ್ನು ಆಪರೇಷನ್ ಆಲ್-ಅಕ್ಸಾ ಎಂಬ ಕಾರ್ಯಾಚರಣೆಯಲ್ಲಿ ಸಂಪೂರ್ಣ ನಿಯಂತ್ರಿಸುತ್ತೇವೆ ಎಂದು ಅಮೆರಿಕ ಉಗ್ರರಿಗೆ ಖಡಕ್ ಎಚ್ಚರಿಕೆ ರವಾನಿಸಿದೆ




