ಹೆಬ್ರಿ: ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸುತ್ತಿದ್ದ ವಾಸ್ತವ್ಯದ ಕಟ್ಟಡವನ್ನು ತೆರವುಗೊಳಿಸುತ್ತಿದ್ದ ವೇಳೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಐವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕಾಸನ್ ಮಕ್ಕಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಸುಧಾಕರ ಎಂಬವರು ಅಕ್ರಮವಾಗಿ ವಾಸ್ತವ್ಯದ ಕಟ್ಟಡ ನಿರ್ಮಾಣ ಮಾಡುತ್ತಿರುವ ಕುರಿತು ಬಂದ ದೂರಿನ ಹಿನ್ನಲೆಯಲ್ಲಿ ಹೆಬ್ರಿ ತಹಶೀಲ್ದಾರ್ ಅವರ ಆದೇಶದಂತೆ ಹೆಬ್ರಿ ತಾಲೂಕು ಕಂದಾಯ ನಿರೀಕ್ಷಕರಾದ ಹಿತೇಶ್,ಯು.ಬಿ ತನ್ನ ಸಿಬ್ಬಂದಿಗಳ ಜತೆ ಅ.27ರಂದು ಬೆಳಗ್ಗೆ 11 ಗಂಟೆಗೆ ಕಟ್ಟಡ ತೆರವು ಮಾಡಲು ಮುಂದಾದಾಗ ಆರೋಪಿಗಳಾದ ಸುಧಾಕರ,ಸುಜಾತ, ರತ್ನಾ, ವನಜ ಹಾಗೂ ಸುಜಾತ ಎಂಬವರು ಅಧಿಕಾರಿಗಳ ಜತೆ ವಾಗ್ವಾದ ನಡೆಸಿ ಕಟ್ಟಡ ತೆರವಿಗೆ ಅಡ್ಡಿಪಡಿಸಿ ಕರ್ತವ್ಯಕ್ಕೆ ಅಡ್ಡಿಯುಂಟುಮಾಡಿದ್ದಾರೆ ಎಂದು ಹಿತೇಶ್ ಹೆಬ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.





