ಬೆಳಗಾವಿ : ಲೋಕಸಭೆ ಚುನಾವಣೆಗೆ ಸಜ್ಜಾಗಿ, ಗ್ಯಾರಂಟಿ ಯೋಜನೆಗಳ ಲಾಭ ಪಕ್ಷಕ್ಕಾಗಬೇಕು. ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಗೆ ಲೀಡ್ ಕೊಡಿಸುವ ಹೊಣೆ ನಿಮ್ಮದು ಎಂದು ಕಾಂಗ್ರೆಸ್ ಶಾಸಕರಿಗೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.
ನಗರದ ರೆಸಾರ್ಟ್ವೊಂದರಲ್ಲಿ ಬುಧವಾರ ನಡೆದ ಸಭೆಯಲ್ಲಿ ಪಕ್ಷದ ನಾಯಕರು ಹಲವು ಸೂಚನೆಗಳನ್ನು ನೀಡಿದರು. ಸಮಸ್ಯೆಗಳೇನೇ ಇದ್ದರೂ ನೇರವಾಗಿ ತಿಳಿಸಿ, ಸಾಧ್ಯವಾದಷ್ಟು ಬಹಿರಂಗವಾಗಿ ಅಸಮಾಧಾನ ಹೊರಹಾಕದಿರಿ ಎಂದೂ ಸೂಚನೆ ನೀಡಲಾಯಿತು.
ನಿಗಮ-ಮಂಡಳಿ ನೇಮಕ ಬಹುತೇಕ ಅಂತಿಮವಾಗಿದೆ. ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಆದೇಶ ಮಾಡಲಾಗುತ್ತದೆ ಎಂಬ ಸುಳಿವನ್ನೂ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.ಇದೇ ವೇಳೆ, ಶಾಸಕರನೇಕರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಯಾಗಿ ಅನುದಾನದ ಬಗ್ಗೆ ಚಿಂತೆ ಬೇಡ, ಸಾಧ್ಯವಾದಷ್ಟು
ಸಹಕಾರ ನೀಡುವುದಾಗಿ ಸಿಎಂ ಭರವಸೆ ನೀಡಿದರು.
ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸಚಿವರಾದ ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಬೋಸರಾಜು, ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷರಾದ ಚಂದ್ರಪ್ಪ, ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಮ್ ಇತರರಿದ್ದರು.








