ಬೆಂಗಳೂರು: ದೆಹಲಿ ಪ್ರವಾಸದಲ್ಲಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ಇಂದು ರಾಜ್ಯಕ್ಕೆ ವಾಪಸಾಗಲಿದ್ದು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವರೇ ಎನ್ನುವ ಬಗ್ಗೆ ಭಾರೀ ಕುತೂಹಲ ಸೃಷ್ಟಿಸಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರಿಗೆ ಜು.26ರಂದು ಶೋಕಾಸ್ ನೋಟಿಸ್ ನೀಡಿದ ಬಳಿಕ ರಾಜ್ಯಪಾಲರು ದೆಹಲಿ ಪ್ರವಾಸಕ್ಕೆ ತೆರಳಿದ್ದರು. ಇದರ ನಡುವೆ ನೋಟಿಸ್ ವಾಪಸ್ ಪಡೆಯಲು ಸಂಪುಟ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಿದೆ. ಮತ್ತೊಂದೆಡೆ ನೋಟಿಸ್‌ಗೆ ಮುಖ್ಯಮಂತ್ರಿ ಅವರು ಉತ್ತರವನ್ನೂ ಕೊಟ್ಟಾಗಿದೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ. ಇದೀಗ ರಾಜ್ಯಪಾಲರು ಇಂದು ಮಧ್ಯಾಹ್ನದ ವೇಳೆಗೆ ರಾಜ್ಯಕ್ಕೆ ವಾಪಾಸಾಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿಸುವ ವಿಚಾರವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆ ಮಾಡಿದೆ.
ಪ್ರಸ್ತುತ ಸಂಸತ್‌ನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿರುವುದರಿಂದ ಪ್ರಾಸಿಕ್ಯೂಷನ್‌ಗೆ ಈಗಲೇ ಅನುಮತಿ ನೀಡಿದರೆ ಸದನದಲ್ಲಿ ಪ್ರತಿಪಕ್ಷಗಳು ಭಾರೀ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಹಾಗಾಗಿ ಈಗಲೇ ಅನುಮತಿ ನೀಡುತ್ತಾರೆಯೇ ಅಥವಾ ಅಧಿವೇಶನ ಮುಗಿಯುವವರೆಗೆ ಕಾಯಬಹುದಾ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
`