ಬೆಂಗಳೂರು: ರಾಜ್ಯದಲ್ಲಿ ಹೊಸ ಬಿಪಿಎಲ್ ಕಾರ್ಡುಗಳಿಗಾಗಿ ಅರ್ಜಿಗಳು ಬರುತ್ತಿವೆ, ಇಲಾಖೆಯು ಅರ್ಜಿಗಳ ಪರಿಷ್ಕರಣೆ ನಡೆಸಿ ಅರ್ಹರಿಗೆ ಮಾತ್ರ ಕಾರ್ಡುಗಳನ್ನು ವಿತರಿಸಲಿದೆ. ಸುಮಾರು 90,000 ಜನ ಅರ್ಜಿ ಸಲ್ಲಿಸಿದ್ದು, ದಾಖಲಾತಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಸೆಪ್ಟಂಬರ್ ತಿಂಗಳಲ್ಲಿ ಹೊಸ ಕಾರ್ಡ್ ಗಳನ್ನು ವಿತರಿಸುವ ಕೆಲಸ ಪ್ರಾರಂಭಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 15 ಲಕ್ಷ ಜನ ಎಪಿಎಲ್ ಕಾರ್ಡುದಾರರಿದ್ದು ಅವರಲ್ಲಿ ಸುಮಾರು ಎರಡು ಲಕ್ಷ ಜನ ಮಾತ್ರ ಅಕ್ಕಿ ತೆಗೆದುಕೊಳ್ಳುತ್ತಿದ್ದಾರೆ , ಈ ಕಾರ್ಡನ್ನು ಹೊಂದಿದವರಿಗೆ ಕಡಿಮೆ ದರದಲ್ಲಿ ಅಕ್ಕಿ ಒದಗಿಸುವ ಕೆಲಸ ತಮ್ಮ ಇಲಾಖೆಯಿಂದ ನಡೆಯುತ್ತಿದೆ ಎಂದರು.
ಬಿಪಿಲ್ ಕಾರ್ಡ್ ಗಳ ಸಂಖ್ಯೆ ಹೆಚ್ಚುವ ಅಥವಾ ಕಡಿಮೆಯಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಕುಟುಂಬವೊಂದರ ಸದಸ್ಯರು ಒಂದೇ ಮನೆಯಲ್ಲಿ ವಾಸವಾಗಿರದೆ ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡುತ್ತಾ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದ್ದರೆ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ತಹಸೀಲ್ದಾರ ಆಹಾರ ಮತ್ತು ನಾಗರಿಕ ಪೂರೈಕೆಗೆ ಇಲಾಖೆಗೆ ದೃಢೀಕರಿಸಬೇಕಾಗುತ್ತದೆ, ಅವರ ದೃಢೀಕರಣದ ನಂತರವೇ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು. ಜೊತೆಗೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
`