ಕಾರ್ಕಳ: ಅಮಾಯಕ ಯುವತಿಯೊಬ್ಬಳ ಮೇಲೆ ದುರುಳರು ಎಸಗಿರುವ ಸಾಮೂಹಿಕ ಅತ್ಯಾಚಾರ ಅತ್ಯಂತ ಖಂಡನೀಯ, ಈ ಕೃತ್ಯದಲ್ಲಿ ಭಾಗಿಯಾಗಿರುವ ಮುಸ್ಲಿಂ ಸಮುದಾಯುದ ಅಲ್ತಾಫ್ ಎಂಬಾತ ಓರ್ವ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿ, ಈ ಹಿಂದೆ ಡ್ರಗ್ಸ್ ಮಾರಾಟ ಜಾಲ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಈತನಿಂದ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬಂದಿದ್ದು, ಈತನ ವಿರುದ್ಧ ಪೊಲೀಸರು ಅತ್ಯಂತ ಕಠಿಣ ಕ್ರಮ ಜರುಗಿಸಬೇಕೆಂದು ಕಾರ್ಕಳ ಮುಸ್ಲಿಂ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಕಾರ್ಕಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಮಾತ್ ಮುಖಂಡ ಮೊಹಮ್ಮದ್ ಶರೀಫ್ ಮಾತನಾಡಿ, ಆರೋಪಿ ಅಲ್ತಾಫ್ ಓರ್ವ ನೈಜ ಮುಸಲ್ಮಾನನಲ್ಲ, ಆತ ಎಂದಿಗೂ ಮಸೀದಿಗೆ ಹೋದವನಲ್ಲ ಆತನಿಗೆ ಮುಸ್ಲಿಂ ಸಮಾಜವು ಜಮಾತ್ ನಿಂದ ಬಹಿಷ್ಕಾರ ಹಾಕುವುದಾಗಿ ಹೇಳಿದರು. ಕಾರ್ಕಳದಲ್ಲಿ ಹಿಂದೂ ಮುಸ್ಲಿಂ ಸಮುದಾಯವರು ಅನ್ಯೋನ್ಯತೆಯಿಂದ ಬಾಳಿದವರು, ಇಂತಹ ಸಾಮರಸ್ಯವನ್ನು ಕೆಡಿಸುವ ಕೃತ್ಯದ ವಿರುದ್ಧ ಆರೋಪಿಗೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಇದಲ್ಲದೇ ಅಲ್ತಾಫ್ ಎಂಬಾತನಿಗೆ ಡ್ರಗ್ಸ್ ನಂಟು ಹೊಂದಿದ್ದು, ಈತನನ್ನು ಬಿಡಿಸಲು ಡ್ರಗ್ಸ್ ಮಾಫಿಯಾ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ.ಈತನಿಂದ ಮುಸ್ಲಿಂ ಮಕ್ಕಳು ಹಾಗೂ ಯುವಕರನ್ನು ದೂರವಿಡುವಂತೆ ನಮಾಜ್ ಸಂದರ್ಭದಲ್ಲಿ ತಿಳಿ ಹೇಳುತ್ತಿದ್ದೇವೆ. ಈ ಡ್ರಗ್ಸ್ ಮಾಫಿಯಾಗೆ ಬಲಿಬೀಳದಂತೆ ಎಲ್ಲಾ ಪೋಷಕರು ಜಾಗರೂಕರಾಗಿರಬೇಕೆಂದರು.ಮಾತ್ರವಲ್ಲದೇ ಯಾವ ವಕೀಲರು ಕೂಡ ನ್ಯಾಯಾಲಯದಲ್ಲಿ ವಕಾಲತು ಹಾಕಬಾರದು, ಇಂತಹ ಆರೋಪಿಗಳಿಗೆ ಸಮಾಜವೇ ಬಹಿಷ್ಕಾರ ಹಾಕಬೇಕು ಮೊಹಮ್ಮದ್ ಶರೀಫ್ ಆಗ್ರಹಿಸಿದರು.
ಈ ಕೃತ್ಯ ನಡೆದ ಕೇವಲ ಒಂದೇ ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರ ಕ್ರಮವನ್ನು ಶರೀಫ್ ಶ್ಲಾಘಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಅಶ್ಪಕ್ ಅಹಮ್ಮದ್, ಮುಸ್ಲಿಂ ಮುಖಂಡರಾದ ಶಬ್ಬೀರ್ ಶೇಖ್, ಮೊಹಮ್ಮದ್ ಗೌಸ್, ನಾಸಿರ್ ಶೇಖ್, ಸಮದ್ ಖಾನ್,ಅಬ್ದುಲ್ಲಾ, ಇಕ್ಬಾಲ್ ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
























`
