ಕಾರ್ಕಳ : ಕಾರ್ಕಳದಲ್ಲಿ ನಡೆದ ಯುವತಿ ಅತ್ಯಾಚಾರ ಪ್ರಕರಣವನ್ನು ಕಾಂಗ್ರೆಸ್ ಖಂಡಿಸುತ್ತದೆ. ಅತ್ಯಾಚಾರದ ಎ1 ಆರೋಪಿ ಅಲ್ತಾಫ್ ಬಂಧನವಾದಾಗ ಬಿಜೆಪಿಯವರು ಬೊಬ್ಬೆ ಹೊಡೆದರು. ಅವರಿಗೆ ಸಂತ್ರಸ್ತ ಹುಡುಗಿ ಹಿಂದುವಾಗಿ ಕಂಡಳು, ಅತ್ಯಾಚಾರ ಪ್ರಕರಣವನ್ನು “ಜಿಹಾದಿ” ಕೃತ್ಯವಾಗಿ ಚಿತ್ರಿಸಲಾಯಿತು.ಸರಣಿ ಪ್ರತಿಭಟನೆ, ಪತ್ರಿಕಾ ಹೇಳಿಕೆಗಳನ್ನು ನೀಡಿ NIA ತನಿಖೆ ನಡೆಯಬೇಕೆಂಬ ಆಗ್ರಹಗಳು ಕೇಳಿ ಬಂದವು. ಅಲ್ಲದೇ ಮರುದಿನ ಸಂಘಪರಿವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಸಮುದಾಯವನ್ನು ಹಿಗ್ಗಾಮುಗ್ಗ ಜಾಡಿಸಲಾಯಿತು. ಆರೋಪಿ ಅಲ್ತಾಫ್ ಪರ ವಕೀಲರುಗಳು ವಕಾಲತ್ತು ಹಾಕಬಾರದು ಎಂದು ಮನವಿ ಮಾಡಿದ್ದ ತಾಲೂಕಿನ ಮುಸ್ಲಿಂ ಮುಖಂಡರಿಗೆ ಶಾಸಕ ಸುನಿಲ್ ಕುಮಾರ್, “ಆರೋಪಿಯನ್ನು ಊರಿನ ಸರ್ಕಲ್ ನಲ್ಲಿ ಹಿಡಿದು ಬಡಿಯಲು ಸಿದ್ದರಿದ್ದೀರಾ” ಎಂದು ಬೆದರಿಕೆಯ ಧ್ವನಿಯಲ್ಲಿ ಎಚ್ಚರಿಕೆ ನೀಡಿದರು.
ಹಿಂದು ಯುವಕರು ಮನಸ್ಸು ಮಾಡಿದರೆ ಹೆಣ ಇಡಲು ದೇಶದಲ್ಲಿ ಫ್ರಿಡ್ಜ್ ಸಾಕಾಗಲಿಕ್ಕಿಲ್ಲ ಎಂದು ಪರೋಕ್ಷವಾಗಿ ಹಿಂದು ಯುವಕರಿಗೆ ಅತ್ಯಾಚಾರ ನಡೆಸಲು ಕರೆ ನೀಡಿದ ಸುನೀಲ್ ಕುಮಾರ್ ಅವರದ್ದು ಪೈಶಾಚಿಕ ಮನಸ್ಥಿತಿಯಾಗಿದೆ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ ಹೇಳಿದರು.
ಅವರು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಒಬ್ಬ ಮುಖಂಡನಂತೂ ಈ ಸಭೆಯಲ್ಲಿ ಹಿಂದುಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದು ಕಂಡು ಸಂತಸವಾಯಿತು. “ಹಿಂದುತ್ವ” ಕಾರ್ಕಳದಲ್ಲಿ ಗಟ್ಟಿಯಾಗಿ ಇದೆ. ನಿಮ್ಮ (ಮುಸ್ಲಿಮರ) ನಡೆಗಳು ಹೀಗೇ ಮುಂದುವರಿದರೆ ಮೆರವಣಿಗೆಯಲ್ಲಿ ನಿಮ್ಮ ಮನೆಗೇ ಬರುತ್ತೇವೆ” ಎಂದು ತೀರಾ ಪ್ರಚೋದನಾಕಾರಿ ಭಾಷಣ ಮಾಡಿದ. ಆದರೆ ಸೋಮವಾರ ಸಂಜೆ ಉಡುಪಿ ಎಸ್ ಪಿ ಸುದ್ದಿಗೋಷ್ಟಿ ನಡೆಸಿ ಅತ್ಯಾಚಾರ ಪ್ರಕರಣದ 3ನೇ ಆರೋಪಿ ಅಭಯ್ ನನ್ನು ಬಂಧಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಅಭಯ್ ಹಿಂದು ಅಷ್ಟೆ ಅಲ್ಲ, ಈತ ಬಿಜೆಪಿ ಪರಿವಾರಕ್ಕೆ ಸೇರಿದವನು, ಶಾಸಕ ಸುನಿಲ್ ಕುಮಾರ್ ಕಟ್ಟಾ ಬೆಂಬಲಿಗನೂ ಹೌದು. ಈಗ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಈಗ ಏನಂತಾರೆ ? ಎಂದು ಪ್ರಶ್ನಿಸಿದರು.
ಕಳೆದ ನಾಲ್ಕು ತಿಂಗಳುಗಳ ಹಿಂದೆ ಇವರದೆ ಪಂಚಾಯತ್ ಸದಸ್ಯ ದಲಿತ ಬಾಲಕಿಗೆ ಲೈಂಗಿಕ ಕಿರುಕುಳದ ಆರೋಪದಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಜೈಲು ಪಾಲಾಗಿರುತ್ತಾನೆ ಈ ಬಗ್ಗೆ ಶಾಸಕರಿಂದ ಯಾವುದೇ ಹೇಳಿಕೆಗಳು ಬಂದಿಲ್ಲ.
ಬಿಜೆಪಿ ಪರಿವಾರ ಇನ್ನಾದರು ಇಂತಹ ಲಜ್ಜೆಗೇಡಿ ರಾಜಾಕರಣ ಕೈಬಿಡಲಿ. ಚುನಾವಣಾ ಲಾಭಗಳಿಕೆಗೆ ಅಗ್ಗದ, ಅಮಾಯಕರ ಬಲಿಪಡೆಯುವ ದಾರಿಯ ಬದಲಿಗೆ ಅಭಿವೃದ್ದಿಯ ದಾರಿ ಅನುಸರಿಸಲಿ. ಸಮುದಾಯವನ್ನು ಪ್ರತೀಕಾರಕ್ಕೆ ಪ್ರಚೋದಿಸುವ ಅತ್ಯಾಚಾರದಂತಹ ಹೀನ ಅಪರಾಧ, ಸಾಮಾಜಿಕ ಸಮಸ್ಯೆಯನ್ನು ಬಗೆ ಹರಿಸುವ ವಿಧಾನ ಇದಲ್ಲ. ನಾಗರಿಕ ಸಮಾಜ ಇಂತಹ ರಾಜಕಾರಣವನ್ನು ಬಲವಾಗಿ ವಿರೋಧಿಸಬೇಕು. ಅತ್ಯಾಚಾರದ ಸಂತ್ರಸ್ತರ ಪರವಾಗಿ ಒಗ್ಗಟ್ಟಾಗಿ ನಿಲ್ಲಬೇಕು. ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಜಿಲ್ಲಾ NSUI ಅಧ್ಯಕ್ಷ ಸೌರಭ್ ಬಳ್ಳಾಲ್, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ನ ಸಜ್ಜನ್ ಶೆಟ್ಟಿ,ಬ್ರಹ್ಮಾವರ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ನಾಯರಿ ಉಪಸ್ಥಿತರಿದ್ದರು.










`
