
ಬೆಂಗಳೂರು (ಮಾ.22): ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವ ಮುನ್ನವೇ ದಾಖಲೆಗಳ ಸಂಗ್ರಹಣೆ ಮಾಡುವುದು ಈ ಕುರಿತ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸುವ ಮುನ್ನ ದಾಖಲೆ ಸಂಗ್ರಹಿಸುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ. ಪೂರ್ವಾನುಮತಿ ಪಡೆಯದೆ ತನಿಖೆ ನಡೆಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯಿತಿ ಕಚೇರಿಯ 2015-16ನೇ ಸಾಲಿನಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಎಸ್.ಲಕ್ಷ್ಮೀ ಸೇರಿ ಇತರೆ ಇಬ್ಬರು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1983ರ ಸೆಕ್ಷನ್ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಲೋಕಾಯುಕ್ತ ಪೊಲೀಸರು ಅನಾಮಧೇಯ ದೂರು ಆಧರಿಸಿ ಸರ್ಕಾರಿ ಸೇವಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಹಾಗೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಮುನ್ನ ವಿವರವಾದ ಪ್ರಾಥಮಿಕ ತನಿಖೆ ನಡೆಸುವುದು, ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವುದು ಮತ್ತು ದಾಖಲೆ ಸಂಗ್ರಹಿಸುವುದು, ದಸ್ತಾವೇಜು ನಿರ್ಮಿಸುವುದನ್ನು ಮಾಡುವಂತಿಲ್ಲ. ಹೀಗೆ ಮಾಡಿದರೆ ಅದು ಕಾಯ್ದೆಯ ಸೆಕ್ಷನ್ 17ಎ ಅನ್ನು ರೂಪಿಸಿದ ಶಾಸಕಾಂಗದ ಉದ್ದೇಶವನ್ನೇ ನಿಷ್ಪಲಗೊಳಿಸುತ್ತದೆ ಎಂದು ಪೀಠ ಹೇಳಿದೆ.





K
