ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಸದನದಲ್ಲಿ ಹನಿಟ್ರ್ಯಾಪ್ ಹಾಗೂ ಕಾಮಗಾರಿ ಗುತ್ತಿಗೆ ವಿಚಾರದಲ್ಲಿ ಮುಸ್ಲಿಮರಿಗೆ ಶೇ 4 ರ ಮೀಸಲಾತಿ ವಿಧೇಯಕ ಅಂಗೀಕಾರ ಸಂದರ್ಭದಲ್ಲಿ ವಿಪಕ್ಷ ಬಿಜೆಪಿಯ ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪದಲ್ಲಿ18 ಜನ ಶಾಸಕರನ್ನು ಏಕಾಎಕಿ ಸುಧೀರ್ಘ 6 ತಿಂಗಳುಗಳ ಕಾಲ ಅಮಾನತು ಮಾಡಿದ ವಿಷಯದ ಕುರಿತು ಸ್ಪೀಕರ್ ನಡೆ ಖಂಡಿಸಿ ಶಾಸಕ ಸುನಿಲ್ ಕುಮಾರ್ ಯ.ಟಿ ಖಾದರ್ ಅವರಿಗೆ ಸುಧೀರ್ಘ ಪತ್ರ ಬರೆದಿದ್ದಾರೆ.
ಈ ಪತ್ರದ ಸಾರಾಂಶ ಇಂತಿದೆ
ಸಭಾಧ್ಯಕ್ಷರ ಪೀಠ ದುರ್ಬಳಕೆಗಾಗಿ ಆಕ್ಷೇಪ ಪತ್ರ:
ಸಪ್ರೇಮ ವಂದನೆಗಳು, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನ ಸಭೆ ಹಾಗೂ ಸುಗಮ ಕಲಾಪ ನಿರ್ವಹಣೆಯ ಸಂಪೂರ್ಣ ಹೊಣೆ ಸ್ಪೀಕರ್ ಅವರದ್ದು ಎಂಬುದು ನಿರ್ವಿವಾದ. ಸದನದ ಸಂಪೂರ್ಣ ಉತ್ತರದಾಯಿ ಸ್ಪೀಕರ್. ಹೀಗಾಗಿ ಆ ಸದನದ ಸದಸ್ಯರ ಹಕ್ಕು ಬಾಧ್ಯತೆಯ ಹೊಣೆಯೂ ತಮ್ಮದೇ ಆಗಿರುತ್ತದೆ. ಈ ಸ್ಪೀಕರ್ ಸ್ಥಾನದಲ್ಲಿ ಕುಳಿತು ತೀರ್ಮಾನ ಕೊಡುವುದೆಂದರೆ ಅದು “ಅಗ್ನಿದಿವ್ಯ”, ಅಂಥ ಘನ ಇತಿಹಾಸವನ್ನು ಹೊಂದಿರುವ ಕರ್ನಾಟಕ ವಿಧಾನಸಭೆಯ ಪರಂಪರೆಯ ಕೊಂಡಿಯನ್ನು ನಿನ್ನೆ ನೀವು ತೆಗೆದುಕೊಂಡ ನಿರ್ಣಯ ಕತ್ತರಿಸಿ ಹಾಕಿತು ಎಂಬುದು ಬೇಸರದ ಸಂಗತಿಯಾದರೂ ಸತ್ಯ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕಪ್ರಾಯವಾದ ಹನಿಟ್ರ್ಯಾಪ್ ವಿಚಾರವನ್ನು ಸಚಿವರೊಬ್ಬರು ಸದನದಲ್ಲಿ ಪ್ರಸ್ತಾಪಿಸಿ ಹತಾಶೆ ವ್ಯಕ್ತಪಡಿಸಿದಾಗ ಈ ಬಗ್ಗೆ ತನಿಖೆಯಾಗಬೇಕು, ತನಿಖಾ ಸ್ವರೂಪ ಸದನದಲ್ಲೇ ನಿರ್ಣಯವಾಗಬೇಕು ಎಂದು ಒತ್ತಾಯಿಸುವುದು ಪ್ರತಿಪಕ್ಷದ ನ್ಯಾಯಬದ್ಧ ಕರ್ತವ್ಯ. ಅದನ್ನು ಬಿಜೆಪಿ ಸದಸ್ಯರು ಮಾಡಿದ್ದಾರೆ. ಆದರೆ ಸರ್ಕಾರ ಹಾಗೂ ಮುಖ್ಯಮಂತ್ರಿ ಇದಕ್ಕೆ ಸ್ಪಂದಿಸದೇ ಇದ್ದಾಗ ನಾವು ಏನು ಮಾಡಬೇಕು ? ಸದನದಲ್ಲಿ ಪ್ರತಿಭಟನೆ ನಡೆಸುವುದು, ಬಾವಿಗೆ ಇಳಿದು ಘೋಷಣೆ ಹಾಕುವುದು ಸಹಜವಲ್ಲವೇ ? ಆದರೆ ತಾವು ಈ ಪ್ರತಿಭಟನಾ ಸ್ವಾತಂತ್ರ್ಯ ಮೊಟಕು ಮಾಡಿದಿರಿ. ಸದನ ಸ್ವಸ್ಥಿತಿಯಲ್ಲಿ ಇಲ್ಲದೇ ಇರುವಾಗ ಬಜೆಟ್ ನಂಥ ಪ್ರಮುಖ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಉತ್ತರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ವಿಪಕ್ಷಗಳ ಧ್ವನಿಗೆ ಓಗೊಡದೇ ಇದ್ದದ್ದು ಪೀಠಾಸೀನ ಅಧಿಕಾರಿಯ ದಮನಕಾರಿ ಪ್ರವೃತ್ತಿ ಎಂದೇ ನಾವು
ಅರ್ಥೈಸಬೇಕಲ್ಲವೇ ? ಇದರಿಂದ ಕೆರಳಿ ಸಭಾಧ್ಯಕ್ಷರ ಪೀಠದತ್ತ ಧಾವಿಸಿದ ಶಾಸಕರ ಸಹಜ ಆಕ್ರೋಶವನ್ನು ನೀವು ಅಶಿಸ್ತು ಎಂದು ಪರಿಗಣಿಸಿ ಹದಿನೆಂಟು ಜನರನ್ನು ಆರು ತಿಂಗಳು ಕಾಲ ಅಮಾನತುಗೊಳಿಸಿರುವುದು ಈ ಶಾಸನ ಸಭೆಯ ಕರಾಳ ನಿರ್ಣಯ.
ಮಾನ್ಯ ಸಭಾಧ್ಯಕ್ಷರೇ, ಅಷ್ಟಕ್ಕೂ ನೀವು ಅಮಾನತುಗೊಳಿಸಿದ್ದು ಯಾರನ್ನು ? ನೀವು ಬೆಳಗ್ಗೆ 7.45 ಕ್ಕೆ ಕಲಾಪ ಪ್ರಾರಂಭಿಸಿದಾಗಲು ಶಿಸ್ತಿನಿಂದ ಬಂದು ಕುಳಿತು, ತಮ್ಮದೊಂದು ಪುಟ್ಟ ಗಮನ ಸೆಳೆಯುವ ಸೂಚನೆಗಾಗಿ ರಾತ್ರಿ 11 ಗಂಟೆಯವರೆಗೆ ಕಾಯ್ದವರಲ್ಲವೇ ? ಸಭಾಧ್ಯಕ್ಷರೇ ಒಂದು ನಿಮಿಷ ಅವಕಾಶ ಕೊಡಿ ಎಂದು ವಿಧೇಯ ವಿದ್ಯಾರ್ಥಿಯಂತೆ ಪ್ರಾರ್ಥಿಸಿದವರಲ್ಲವೇ ? ಸಚಿವರು, ಆಡಳಿತ ಪಕ್ಷದ ಸದಸ್ಯರು ಸದನಕ್ಕೆ ಸುಳಿಯದೇ ಇದ್ದರೂ ಸಕಾಲಕ್ಕೆ ಬಂದು ಕೋರಂ ಭರ್ತಿ ಮಾಡಿ ನಿಮ್ಮ ಹಾಗೂ ಪೀಠದ ಗೌರವ ಎತ್ತಿ ಹಿಡಿದವರಲ್ಲವೇ ? ಈ ಗೌರವಕ್ಕೆ ಪ್ರತಿಯಾಗಿ ನೀವು ಮಾಡಿದ್ದಾದರೂ ಏನು ? ಸಹಜ ಆಕ್ರೋಶವನ್ನು ತಣಿಸುವ ಬದಲು ಅವರ ಅಧಿಕಾರವನ್ನೇ ಮೊಟಕು ಮಾಡಿದಿರಿ. ಅಮಾನತು ಆದೇಶ ಪ್ರಕಟಿಸುವ ಮುನ್ನ ಬಿಜೆಪಿ ಜೆಡಿಎಸ್ ಸದಸ್ಯರ ಜತೆ ಸಂಧಾನಸಭೆ ನಡೆಸದೇ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಜತೆ ರಹಸ್ಯ ಸಭೆ ನಡೆಸಿದಿರಿ. ಅಧಿವೇಶನದ ಕೊನೆಯ ದಿನ ತೆಗೆದುಕೊಂಡ ಈ ಅಮಾನತು ಆದೇಶ ತಮ್ಮದೋ, ಅಥವಾ ಮುಖ್ಯಮಂತ್ರಿಗಳು ತಮ್ಮ ಕೈ ಹಿಡಿದು ಬಲವಂತದಿಂದ ಬರೆಸಿದ್ದೋ ? ಏನೇ ಆದರೂ ತಮ್ಮ ಈ ನಿರ್ಣಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪಾಲಿಗೆ ಶಾಶ್ವತ ಕಪ್ಪು ಚುಕ್ಕೆ. ಈಗಲಾದರೂ ತಮ್ಮ ನಿರ್ಣಯವನ್ನು ವಾಪಾಸ್ ತೆಗೆದುಕೊಳ್ಳುವಿರಿ ಎಂದು ಭಾವಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ
K