Share this news

ಧಾರವಾಡ, ಫೆ.24: ಜನಸಾಮಾನ್ಯರ ವೇದಿಕೆ ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಆರಂಭದಲ್ಲಿ ಪ್ರತಿಭಟನೆಗೆ ನಿರಾಕರಿಸಿದ್ದ ಪೊಲೀಸರು 34 ಜನ ಹೋರಾಟಗಾರರನ್ನು ಬಂಧಿಸಿದರು. ಈ ವೇಳೆ ಭಾರೀ ಸಂಖ್ಯೆಯಲ್ಲಿ ಸೇರಿದ ಉದ್ಯೋಗಾಕಾಂಕ್ಷಿಗಳು ಬಂಧನ ಖಂಡಿಸಿ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿ ಮಹಿಳೆಯೊಬ್ಬರು ಮಾತನಾಡಿ, ನಮ್ಮನ್ನು ಬಂಧಿಸಲು ನಾವೇನು ಏನು ಕೇಳುತ್ತಿದ್ದೇವೆ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕೇಳುತ್ತಿದ್ದೇವೆ. ಉದ್ಯೋಗಾಕಾಂಕ್ಷಿಗಳು ದರೋಡೆ ಮಾಡಿದ್ದಾರಾ? ಕೊಲೆ ಮಾಡಿದ್ದಾರಾ? ಅವರನ್ನು ಅರೆಸ್ಟ್ ಮಾಡುತ್ತಿದ್ದಾರೆ. ನಾವು ಯಾರ ಮೇಲೆಯೂ ದೌರ್ಜನ್ಯ ಮಾಡುತ್ತಿಲ್ಲ ಆದರೆ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಏಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು. ನಾವು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದಾಗ ನಮ್ಮನ್ನು ಬಂಧಿಸಲು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಶಂಕರ ಅಂಬ್ಲಿ ಮಾತನಾಡಿ, ಉದ್ಯೋಗಾಕಾಂಕ್ಷಿಗಳು ತಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅವಕಾಶವನ್ನು ಮಾಡಿಕೊಡದೆ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಸರ್ಕಾರವು ವಿದ್ಯಾರ್ಥಿಗಳನ್ನು ಬಂಧನ ಮಾಡಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಮಂಡಿಸಲು ಅವಕಾಶ ಮಾಡಿಕೊಡದೆ ಇರುವ ಸರ್ಕಾರದ ನಡೆಯನ್ನು ರೈತ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ತರುವ ಕೆಲಸ ಸರ್ಕಾರ ಮಾಡುತ್ತದೆ. ನಾವರೂ ಯಾರು ಹೋರಾಟಗಾರರು ಕಾನೂನುಬಾಹಿರವಾಗಿ ನಡೆದುಕೊಂಡಿಲ್ಲ. ಪ್ರತಿಭಟನೆಯನ್ನು ಮಾಡುವುದಾಗಿ ಮೊದಲೇ ಪೊಲೀಸರ ಗಮನಕ್ಕೆ ತರಲಾಗಿತ್ತು ಆದರೂ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಹಕ್ಕೊತ್ತಾಯಗಳು:

1.ನೇಮಕಾತಿಯನ್ನು ಕೆಲದೇ ಹುದ್ದೆಗಳಿಗೆ ಸೀಮಿತಗೊಳಿಸದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
2. ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿಯನ್ನು ಎಸ್.ಸಿ, ಎಸ್.ಟಿ ಹಾಗೂ ಒಬಿಸಿಗೆ 33 ಹಾಗೂ ಸಾಮಾನ್ಯ ವರ್ಗಕ್ಕೆ 30 ವರ್ಷಗಳಿಗೆ ಹೆಚ್ಚಿಸಿ ಯಾವುದೇ ನೆಪಗಳನ್ನು ಕೊಡದೇ ಶೀಘ್ರವೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು.
3. ರಾಜ್ಯದಲ್ಲಿ ಕಳೆದ ನಾಲೈದು ವರ್ಷಗಳಿಂದ ಸರಿಯಾದ ನೇಮಕಾತಿಗಳು ನಡೆಯದ ಹಿನ್ನೆಲೆಯಲ್ಲಿ ಎಲ್ಲ ನೇಮಕಾತಿಗಳಿಗೆ ಅರ್ಹ ವಯೋಮಿತಿಯನ್ನು 5 ವರ್ಷಗಳಿಗೆ ಸಡಿಲಿಕೆ ಮಾಡಬೇಕು.
4. ಮೀಸಲಾತಿ, ಒಳ ಮೀಸಲಾತಿ ಗೊಂದಲಗಳನ್ನು ಕೂಡಲೇ ಪರಿಹರಿಸಿ ಅಧಿಸೂಚನೆಗಳನ್ನು ಹೊರಡಿಸಬೇಕು.
5.ಎಲ್ಲಾ ನೇಮಕಾತಿಗಳಲ್ಲಿ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು ಹಾಗೂ ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.

6. KPSC, KEA, KSP, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹಾಗೂ ವಾರ್ಷಿಕ ಕ್ಯಾಲೆಂಡರನ್ನು ಪ್ರಕಟಿಸಿ ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳಬೇಕು.
7. ಎಲ್ಲಾ ನೇಮಕಾತಿ ಪ್ರಕ್ರಿಯೆಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಎಲ್ಲಾ ರೀತಿಯ ಪರೀಕ್ಷಾ ಆಕ್ರಮಗಳನ್ನು ತಡೆಗಟ್ಟಬೇಕು.
8. ಕೇಂದ್ರ ಸರ್ಕಾರದ ಯುಪಿಎಸ್ಸಿ- ಸಿಎಸ್ಇ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸಬೇಕು.
9. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಜಯನಗರ, ಸಪ್ತಾಪುರ, ಶ್ರೀನಗರ, ಕಲ್ಯಾಣನಗರ ಭಾಗದಲ್ಲಿ ಅವರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟಿನ್ ತೆರೆಯಬೇಕು.

ಪ್ರತಿಭಟನೆಯಲ್ಲಿ ಜನಸಾಮಾನ್ಯರ ವೇದಿಕೆಯ ಸಂಚಾಲಕ ಎಲ್ಲಪ್ಪ ಹೆಗಡೆ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ, ಎಸ್ಎಫ್ಐ’ನ ರಾಜ್ಯದ್ಯಕ್ಷ ನಾಗರಾಜ್ ಚಲವಾದಿ, ನಾವು ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ವಕ್ಕಲಿಗ, ಹೋರಾಟ ಸಮಿತಿಯ ರಾಜ್ಯ ಸಹಸಂಚಾಲಕ ಭವಾನಿಶಂಕರ್.ಎಸ್.ಗೌಡ, ಹೋರಾಟಗಾರರು, ರೈತ ಸಂಘಟಕರು, ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *