
ಕಾರ್ಕಳ,ಏ. 08:ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲಾಗದೇ ಸರ್ಕಾರ ದಿವಾಳಿಯಾಗಿದ್ದು, ಇದರಿಂದ ಸರ್ಕಾರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಬಡವರ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ನೀಡಲಾಗದೇ ಸರ್ಕಾರ ನಡೆಸಲು ಆಗದೇ ವಿವಿಧ ಸರ್ಕಾರಗಳು ನೀಡಿದ ಜನಪರ ಯೋಜನೆಗಳನ್ನು ನಿಧಾನವಾಗಿ ನಿಲ್ಲಿಸುವ ಸಂಚು ರೂಪಿಸಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.
ತೀವೃ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವ ನೆಪದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನಗಳನ್ನು ಈಗಾಗಲೇ ಮನ ಬಂದಂತೆ ತಾಲ್ಲೂಕಿನಾದ್ಯಂತ ಸಾವಿರಾರು ಫಲಾನುಭವಿಗಳ ಪಟ್ಟಿಗಳನ್ನು ರದ್ದುಪಡಿಸಿದೆ. ಜೊತೆಗೆ ಆರೋಗ್ಯ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಸೃಷ್ಟಿಸಿಕೊಳ್ಳಲು ಬಡವರು ಮಾಡಿರುವ ಬ್ಯಾಂಕ್ ಸಾಲ ವರದಿಗಳನ್ನು ಪಡೆದು ಅವರ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಿದ್ದಾರೆ. ಬಡವರ ಸೌಲತ್ತುಗಳನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಮತ್ತಷ್ಟು ಬಡತಕ್ಕೆ ತಳ್ಳುವ ಕೆಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ಹೊಂದಿದೆ
ಸರ್ಕಾರದ ಕೆಟ್ಟ ಚಾಳಿಯಿಂದಾಗಿ ಕಾರ್ಕಳ ತಾಲೂಕಿನಾದ್ಯಂತ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಬಿಪಿಎಲ್ ಕಾರ್ಡು ಇಲ್ಲದೇ ಬಡ ಕುಟುಂಬಗಳು ಲಕ್ಷಾಂತರ ವೆಚ್ಚದ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ನಿತ್ಯ ಸಾವಿರಾರು ಕುಟುಂಬಗಳು ತಾಲೂಕು ಕಚೇರಿ ಅಲೆದು ಕಾರ್ಡಿಗಾಗಿ ದುಂಬಾಲು ಬೀಳುತ್ತಿದ್ದರೂ ರಾಜ್ಯ ಸರ್ಕಾರ ಅವರ ಅಹವಾಲು ಸ್ವೀಕರಿಸದಷ್ಟು ಕುರುಡಾಗಿದೆ. ವಿಧವಾ ವೇತನ, ಅಂಗವಿಕಲ ವೇತನದಂತಹ ಅವಶ್ಯಕ ಸೇವೆ ಸಿಗದಿದ್ದರೆ ಈಗಾಗಲೇ ನೊಂದಿರುವ ಕುಟುಂಬಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ಬಡವರ ಭಾಗ್ಯಗಳನ್ನು ಕಿತ್ತುಕೊಳ್ಳುವ ದುಷ್ಟ ಕೃತ್ಯಗಳನ್ನು ನಿಲ್ಲಿಸಬೇಕು. ಅದರಲ್ಲೂ ವಿಶೇಷವಾಗಿ ಬಡವರ ಮೇಲೆ ದಬ್ಬಾಳಿಕೆ ಮಾಡುವಂತ ಇಂತಹ ಕೃತ್ಯಗಳನ್ನು ಉಡುಪಿ ಜಿಲ್ಲಾಡಳಿತ ಮಾಡಬಾರದು,ಇದನ್ನು ಕಾರ್ಕಳ ಬಿಜೆಪಿ ಇದನ್ನು ಅತ್ಯಂತ ಕಟುವಾಗಿ ಖಂಡಿಸುತ್ತದೆ ಎಂದು ನವೀನ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















.
.
.
.
.
.
.
.
.
.
