
ಬೆಂಗಳೂರು,ಏ.17: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಪುನರಾವರ್ತಿತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ಏಪ್ರಿಲ್ 18ರವರೆಗೆ ವಿಸ್ತರಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.
ಈ ಮೊದಲು ಅರ್ಜಿ ಸಲ್ಲಿಸಲು ಇಂದು (ಏಪ್ರಿಲ್ 17) ಕೊನೆಯ ದಿನವಾಗಿತ್ತು. ಆದರೆ, ರಾಜ್ಯದ ಹಲವೆಡೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ತಾಂತ್ರಿಕ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯು ಅರ್ಜಿ ಸಲ್ಲಿಕೆಯ ಅವಧಿಯನ್ನು ಈಗ ಒಂದು ದಿನದ ಮಟ್ಟಿಗೆ ಅಂದರೆ ಏಪ್ರಿಲ್ 18ರವರೆಗೆ ವಿಸ್ತರಿಸಿದೆ.
ಅರ್ಜಿ ಸಲ್ಲಿಸಲು ಬಾಕಿ ಇರುವ ವಿದ್ಯಾರ್ಥಿಗಳು ಈ ಕೂಡಲೇ ವಿಸ್ತರಿಸಿದ ಕಾಲಾವಧಿಯ ಸದುಪಯೋಗ ಪಡೆದುಕೊಳ್ಳಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಅಥವಾ ಆಯಾ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಬಹುದಾಗಿದೆ.



.
.
.
.
.
.
.
.
.
.
