
ಕಾರ್ಕಳ,ಏ. 18: ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆಯ ಮೂಲಕ ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಿರುವುದು ಕೆಟ್ಟ ನಿರ್ಧಾರವಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ಭಾರೀ ತೆರಿಗೆಯ ಹೊರೆ ಬೀಳಲಿದೆ. ಸಂಖ್ಯೆಯನ್ನು ಹೆಚ್ಚಿಸುವ ಬದಲು ಸಂಸದರ ಹೊಣೆಗಾರಿಕೆ ಹಾಗೂ ಸೇವಾಗುಣಮಟ್ಟವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಅಭಿಪ್ರಾಯಪಟ್ಟಿದ್ದಾರೆ.
ಜನರಿಗೆ ನೇರವಾಗಿ ಸೇವೆಯನ್ನು ನೀಡುವುದು ಕಾರ್ಯಾಂಗ. ದೇಶದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸಬೇಕು. ಇದರಿಂದ ಇವೆರಡರ ಸೇವಾಗುಣಮಟ್ಟ ಹೆಚ್ಚುವುದಲ್ಲದೆ ಸೇವೆಗೂ ವೇಗ ಸಿಗುತ್ತದೆ.ಅಲ್ಲದೇ ಸಂಸದರ ವೇತನ ,ವಾಹನ,ಸಿಬ್ಬಂದಿ,ಕಛೇರಿ ಪ್ರವಾಸ, ವೈದ್ಯಕೀಯ ಸೌಲಭ್ಯ , ಇನ್ನೂ ಹಲವಾರು ಸೌಲಭ್ಯಗಳ ವೆಚ್ಚಗಳು ಸೇರಿದಂತೆ ಸರಕಾರದ ಬೊಕ್ಕಸಕ್ಕೆ ದೊಡ್ಡ ಆರ್ಥಿಕ ಸಂಕಷ್ಠ ಎದುರಾಗಲಿದೆ. ಪರಿಣಾಮ ದೇಶದ ಜನರು ಭಾರಿ ತೆರಿಗೆಯನ್ನು ತೆರಬೇಕಾಗಿ ಬರುತ್ತದೆ .
ಈಗ ಜಾರಿಗೊಳಿಸಲು ಮುಂದಾಗಿರುವ ಮಸೂದೆಯಂತೆ ಸಂಸದರ ಸಂಖ್ಯೆಯು 816 (ಹಿಂದೆ 543) ಮತ್ತು ಶಾಸಕರು 4123(ಹಿಂದೆ) ಮತ್ತು ಈಗಿನ ಹೊಸ ಶಾಸಕರು ಸೇರಿದರೆ ಸಂಖ್ಯೆಯು ಸುಮಾರು 6,000 ಆಗಲಿದೆ.ಪ್ರತಿಯೊಬ್ಬರ ಮೇಲಿನ ವಾರ್ಷಿಕ ಖರ್ಚು ಅಂದಾಜು 4.30 ಕೋಟಿ. ಇವರೆಲ್ಲರ ಐದು ವರ್ಷದ ಅವಧಿ ಮುಗಿಯುವಾಗ ಇಷ್ಟೊಂದು ಸಂಸದರು, ಶಾಸಕರ ಮೇಲಿನ ಖರ್ಚು ಸುಮಾರು 60 ಸಾವಿರ ಕೋಟಿ ಆಗುತ್ತದೆ. ಅಷ್ಟೇ ಅಲ್ಲದೆ ಇವರ 5 ವರ್ಷದ ಒಂದು ಅವಧಿ ಮುಗಿದ ಬಳಿಕ ಅವರ ಜೀವನ ಪರ್ಯಂತ ಪಿಂಚಣಿ ಮತ್ತು ಕೆಲ ಸೌಲಭ್ಯಗಳನ್ನು ನೀಡಬೇಕು. ಇವೆಲ್ಲದರ ಆರ್ಥಿಕ ಹೊಣೆ ಹೊರುವವರು ಈ ದೇಶದ ಸಾಮಾನ್ಯ ಜನ, ತೆರಿಗೆದಾರರು. ಈ ಬಗ್ಗೆ ಇನ್ನಾದರೂ ರಾಜಕೀಯ ಪಕ್ಷ ಅಥವಾ ಜನಪ್ರತಿನಿಧಿ/ ಜನ ಸೇವಕರು ಈ ಬಗ್ಗೆ ಧ್ವನಿ ಎತ್ತಬೇಕಿದೆ ಎಂದು ಬೆಳ್ಳಿಪ್ಪಾಡಿ ನೇಮಿರಾಜ್ ರೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



.
.
.
.
.
.
.
.
.
.
