
ಬೆಂಗಳೂರು:,ಏ.30: ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಸರ್ಕಾರದ ವಿರುದ್ಧ ಅಬ್ದುಲ್ ರಜಾಕ್ ನಡೆಸಿದ್ದ ಪತ್ರಿಕಾಗೋಷ್ಠಿ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಧರ್ಮಗುರುಗಳ ವೇಷಧಾರಿಗಳ ತಂಡವೊAದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಈ ಘಟನೆಯ ಹಿಂದೆ ದೊಡ್ಡ ಮಟ್ಟದ ಕ್ರಿಮಿನಲ್ ಪಿತೂರಿ ಇದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎ. ಆಲಂ ಪಾಷಾ ಅವರು ಪತ್ರಿಕಾಗೋಷ್ಠಿ ನಡೆಸಿದ್ದ ಅಬ್ದುಲ್ ರಜಾಕ್ ಟೀಮ್ ವಿರುದ್ಧ ಗೃಹ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ 2026ರ ಏಪ್ರಿಲ್ ರಂದು ಅಬ್ದುಲ್ ರಜಾಕ್ ಎಂಬುವವರ ನೇತೃತ್ವದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ರಜಾಕ್, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಅವರ ಮೇಲೆ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಕ್ರಮವನ್ನು ಹಿಂಪಡೆಯದಿದ್ದರೆ, ಮುಸ್ಲಿಂ ಸಮುದಾಯವು ಕಾಂಗ್ರೆಸ್ಗೆ ‘ತ್ರಿಪಲ್ ತಲಾಖ್’ ನೀಡಲಿದೆ ಎಂದು ಎಚ್ಚರಿಸಿದ್ದರು. ಒಂದು ವೇಳೆ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಮುಂದುವರಿದರೆ ರಸ್ತೆಗಿಳಿದು ಹೋರಾಟ ಮಾಡುವುದಾಗಿ ಅವರು ಬೆದರಿಕೆ ಹಾಕಿದ್ದರು.
ಆದರೆ ಈ ಪ್ರಕರಣದಲ್ಲಿ ದೂರುದಾರ ಆಲಂ ಪಾಷಾ ಅವರು ಪತ್ರಿಕಾಗೋಷ್ಠಿ ಎಂದು ಪರಿಗಣಿಸದೆ, ಇದರ ಹಿಂದೆ ವ್ಯವಸ್ಥಿತ ಸಂಚು ಇದೆ ಎಂದು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿದ್ದ ವ್ಯಕ್ತಿಗಳು ಅಸಲಿ ಧರ್ಮಗುರುಗಳಲ್ಲ, ಬದಲಿಗೆ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸಲು ಯಾವುದೇ ಅಧಿಕಾರವಿಲ್ಲದ ‘ನಕಲಿ’ ವ್ಯಕ್ತಿಗಳು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದಲ್ಲದೇ ಪ್ರಜಾಸತ್ತಾತ್ಮಕ ಸರ್ಕಾರಗಳನ್ನು ಅಸ್ಥಿರಗೊಳಿಸಲು ಅಂತರಾಷ್ಟ್ರೀಯ ಏಜೆನ್ಸಿಗಳಿಂದ ಹಣ ಪಡೆದು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂಬ ಸಂಶಯವನ್ನು ಆಲಂ ಪಾಷ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮತ್ತು ಮುಸ್ಲಿಮೇತರ ಸಮುದಾಯಗಳ ನಡುವೆ ದ್ವೇಷ ಬಿತ್ತಲು ಮತ್ತು ಸರ್ಕಾರದ ವಿರುದ್ಧ ಅಸಮಾಧಾನ ಮೂಡಿಸಲು ಈ ‘ಬಿರಿಯಾನಿ ಸಮ್ಮೇಳನ’ವನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿದ್ದು, ಇದು ವಂಚನೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ. ಇದಲ್ಲದೇ ಪತ್ರಿಕಾಗೋಷ್ಠಿಯ ಹೆಸರಲ್ಲಿ ಅಲ್ಲಿ ಮಾಂಸಾಹಾರದ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದು ಪ್ರೆಸ್ ಕ್ಲಬ್ನ ನಿಯಮಗಳಿಗೆ ಪೂರಕವಾಗಿದೆಯೇ ಮತ್ತು ಈ ಅದ್ದೂರಿ ವೆಚ್ಚಕ್ಕೆ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಪಾಷಾ ಒತ್ತಾಯಿಸಿದ್ದಾರೆ.
ಸದ್ಯ ಆಲಂ ಪಾಷ ನೀಡಿರುವ ದೂರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮತ್ತು ಗೃಹ ಇಲಾಖೆಯ ಮುಂದಿದ್ದು, ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ.


.
.
.
.
.
.
.
.
.
.
.
.
.
.
.
.
.
.
.
.
