
ಬೆಂಗಳೂರು, ಮೇ.19: ತೈಲ ಕಂಪೆನಿಗಳು ದೇಶಾದ್ಯಂತ ಮೇ 15 ರಂದು ಪೆಟ್ರೋಲ್ – ಡೀಸೆಲ್ ಬೆಲೆ 3 ರೂಪಾಯಿ ಏರಿಕೆ ಮಾಡಿದ ಬೆನ್ನಲ್ಲೇ ಮತ್ತೆ ಇಂದಿನಿಂದ 90 ಪೈಸೆ ಹೆಚ್ಚಳ ಮಾಡಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡೆರಡು ಬಾರಿ ಬೆಲೆಏರಿಕೆ ಆಗಿದ್ದು, ಗ್ರಾಹಕರಿಗೆ ಇದು ಭಾರಿ ಹೊರೆಯಾಗಲಿದೆ.
ಕಳೆದ ಶುಕ್ರವಾರದಂದು (ಮೇ 15) ಇಂಧನ ದರ 3 ರೂ.ನಷ್ಟು ಏರಿಕೆಯಾಗಿತ್ತು. ಇಂದು ಬೆಳ್ಳಂಬೆಳಗ್ಗೆ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ (Petrol, Diesel) ದರ ಪ್ರತಿ ಲೀಟರ್ಗೆ ಸರಾಸರಿ 90 ಪೈಸೆ ಏರಿಕೆಯಾಗಿದೆ. ಒಂದೇ ವಾರದಲ್ಲಿ ಎರಡನೇ ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಇದರಿಂದ ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 97.77 ರೂ.ನಿಂದ 98.64 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ದರ 90.67ರೂ.ನಿಂದ 91.58 ರೂ.ಗೆ ತಲುಪಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 91 ಪೈಸೆ ಹೆಚ್ಚಳವಾಗುವುದರೊಂದಿಗೆ 107.59ರೂ.ಗೆ ತಲುಪಿದೆ.
ಕೇವಲ ಐದು ದಿನಗಳ ಅಂತರದಲ್ಲಿ ಎರಡು ಬಾರಿ ಇಂಧನ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುವ ಆತಂಕ ಎದುರಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇಂಧನವು ಹೆಚ್ಚು ದುಬಾರಿಯಾಗುತ್ತಿದ್ದಂತೆ ಬಸ್‌ಗಳು, ಟ್ಯಾಕ್ಸಿಗಳು ಮತ್ತು ಸರಕು ಸಾಗಣೆ ವೆಚ್ಚಗಳು ಹೆಚ್ಚಾಗುತ್ತವೆ. ಇದು ಸಹಜವಾಗಿಯೇ ಇತರ ಅಗತ್ಯ ವಸ್ತುಗಳ ಬೆಲೆಗಳೂ ಸಹ ಗಗನಕ್ಕೇರಲು ಕಾರಣವಾಗುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಹೀಗೆಯೇ ನಿರಂತರವಾಗಿ ಏರುತ್ತಿದ್ದರೆ, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮತ್ತಷ್ಟು ದುಬಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ದೇಶದಲ್ಲಿ ಹಣದುಬ್ಬರ (ಬೆಲೆ ಏರಿಕೆ) ಮತ್ತಷ್ಟು ಹೆಚ್ಚಾಗುವ ಆತಂಕವನ್ನು ಮೂಡಿಸಿದೆ.



.
.
.
.
.
.
.
.
.
.
.
.
.
.
.
.
.
.
.
.
