
ಹುಬ್ಬಳ್ಳಿ,ಮೇ.22: ಮಕ್ಕಳಿಲ್ಲದ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಈಗಾಗಲೇ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ 2ನೇ ಮಹಡಿಯಲ್ಲಿ ನೂತನ ಕೃತಕ ಗರ್ಭಧಾರಣೆ ಕೇಂದ್ರವನ್ನು ಸಂಪೂರ್ಣ ಸರ್ಕಾರಿ ಮಾದರಿಯಲ್ಲಿ ಆರಂಭಿಸಲಾಗುತ್ತಿದ್ದು, ಇದು ಕರ್ನಾಟಕದಲ್ಲೇ ಇಂತಹ ಮೊದಲ ಸರ್ಕಾರಿ ಐವಿಎಫ್ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹುಬ್ಬಳ್ಳಿಯ ಈ ಕೇಂದ್ರದ ಪ್ರಗತಿಯನ್ನು ಗಮನಿಸಿರುವ ರಾಜ್ಯ ಸರ್ಕಾರವು, ಪ್ರಸ್ತುತ ರಾಜ್ಯದ ಇನ್ನೂ ಮೂರು ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿಯೂ ಐವಿಎಫ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ಕೆಲವು ತಿಂಗಳುಗಳ ಹಿಂದೆಯೇ ಈ ಕೇಂದ್ರವು ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಿತ್ತಾದರೂ, ಆರಂಭದಲ್ಲಿ ಕೆಲವು ಗೊಂದಲಗಳಿAದಾಗಿ ವಿಳಂಬವಾಗಿತ್ತು. ಮೊದಲು ಈ ಕೇಂದ್ರವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸರ್ಕಾರ ನಿಗದಿಪಡಿಸುವ ದರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರ ನಡೆಸುವುದು ಕಷ್ಟಸಾಧ್ಯವಾಗಿತ್ತು. ಕೇಂದ್ರದ ಕಾರ್ಯನಿರ್ವಹಣೆ ಮತ್ತು ಸರ್ಕಾರದ ಮಾರ್ಗಸೂಚಿಗಳ ಕುರಿತು ಕೆಎಂಸಿ-ಆರ್‌ಐ ಆಡಳಿತ ಮಂಡಳಿಗೆ ಗೊಂದಲಗಳಿದ್ದವು. ಆದರೆ ಈಗ ರಾಜ್ಯ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು, ಅಗತ್ಯವಿರುವ ಎಲ್ಲಾ ಅನುದಾನಗಳನ್ನು ಬಿಡುಗಡೆ ಮಾಡಿರುವುದರಿಂದ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗಿವೆ.
ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಐವಿಎಫ್ ಚಿಕಿತ್ಸೆಯನ್ನು ಬಡ ಮತ್ತು ಮಧ್ಯಮ ವರ್ಗದ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಕೆಎಂಸಿ-ಆರ್‌ಐ ಆಡಳಿತ ಮಂಡಳಿಯು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಂತಿಮವಾಗಿ ಸರ್ಕಾರದ ಅಧೀನದಲ್ಲಿಯೇ ಕೇಂದ್ರವನ್ನು ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಅಷ್ಟೇ ಅಲ್ಲದೆ, ಈ ಚಿಕಿತ್ಸೆಯನ್ನು ಸರ್ಕಾರದ ಮಹತ್ವಾಕಾಂಕ್ಷಿ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಯೋಜನೆಯ ಅಡಿಯಲ್ಲೇ ನೀಡಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದು ಆರ್ಥಿಕವಾಗಿ ಹಿಂದುಳಿದ ನೂರಾರು ದಂಪತಿಗಳಿಗೆ ವರದಾನವಾಗಲಿದೆ.
ಬಡ ಮತ್ತು ಮಧ್ಯಮ ವರ್ಗದವರ ಆರ್ಥಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ಸರ್ಕಾರ ಅತ್ಯಂತ ಕಡಿಮೆ ದರವನ್ನು ನಿಗದಿಪಡಿಸಿದೆ. ಓರ್ವ ಫಲಾನುಭವಿಗೆ ಕೇವಲ 1,34,000 ರೂಪಾಯಿ ಚಿಕಿತ್ಸಾ ವೆಚ್ಚವನ್ನು ನಿಗದಿ ಮಾಡಲಾಗಿದೆ. ಇದರೊಂದಿಗೆ ಮತ್ತೊಂದು ಮಾನವೀಯ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಒಂದು ವೇಳೆ ಮೊದಲ ಬಾರಿಗೆ ಚಿಕಿತ್ಸೆ ಯಶಸ್ವಿಯಾಗದಿದ್ದರೆ, ಇದೇ ದರದಲ್ಲಿಯೇ (ಹೆಚ್ಚುವರಿ ಹಣ ಪಡೆಯದೆ) ಒಟ್ಟು ಮೂರು ಬಾರಿ ಚಿಕಿತ್ಸೆ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
