
ಅಹಮದಾಬಾದ್,ಜೂ 01: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ದಶಕಗಳ ಕಾಯುವಿಕೆಗೆ ಕಳೆದ ಐಪಿಎಲ್ ಸರಣಿಯಲ್ಲಿ ತಕ್ಕ ಪ್ರತಿಫಲ ಸಿಕ್ಕಿದೆ. ಇದೀಗ ಈ ವರ್ಷದ ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ಗುಜರಾತ್ ಟೈಟಾನ್ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿ ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆದ್ದುಕೊಂಡು ದಾಖಲೆ ನಿರ್ಮಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2026ರ ರೋಮಾಂಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಧೂಳೀಪಟ ಮಾಡಿದ ಆರ್ ಸಿ ಬಿ, ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.ನಾಯಕ ರಜತ್ ಪಾಟೀದಾರ್ ನೇತೃತ್ವದ ಆರ್ ಸಿ ಬಿ ತಂಡವು ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತರ ಐಪಿಎಲ್ ಇತಿಹಾಸದಲ್ಲೇ ಸತತ ಎರಡು ಬಾರಿ ಟ್ರೋಫಿ ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್ ಸಿ ಬಿ ನಾಯಕನ ನಿರ್ಧಾರವನ್ನು ಬೌಲರ್‌ಗಳು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ರಸಿಖ್ ಸಲಾಮ್ ದಾರ್ 27 ರನ್ ನೀಡಿ 3 ಪ್ರಮುಖ ವಿಕೆಟ್ ಕಲೆಹಾಕಿದರೆ, ಅನುಭವಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಪಡೆದು ಗುಜರಾತ್ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇದರಿಂದಾಗಿ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 155 ರನ್ ಗಳಿಸಲಷ್ಟೇ ಶಕ್ತವಾಯಿತು.
ವಿರಾಟ್ ಕೊಹ್ಲಿ ಅಬ್ಬರ; ‘ಚೇಸ್ ಮಾಸ್ಟರ್’ ಅಜೇಯ ಬ್ಯಾಟಿಂಗ್ 156 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್ ಸಿ ಬಿ ತಂಡಕ್ಕೆ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ (32 ರನ್) ಮತ್ತು ವಿರಾಟ್ ಕೊಹ್ಲಿ ಜೋಡಿ 62 ರನ್‌ಗಳ ಉತ್ತಮ ಆರಂಭ ನೀಡಿತು.
ನಂತರ ಮೈದಾನದಲ್ಲಿ ಅಕ್ಷರಶಃ ಕಿಂಗ್ ಕೊಹ್ಲಿ ಸಾಮ್ರಾಜ್ಯವೇ ನಡೆದಿತ್ತು. ಗಾಯದ ನಡುವೆಯೂ ಅದ್ಭುತವಾಗಿ ಆಡಿದ ಕೊಹ್ಲಿ, ಕೇವಲ 25 ಎಸೆತಗಳಲ್ಲಿ ತಮ್ಮ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಅರ್ಧಶತಕ ಪೂರೈಸಿದರು. ಒಟ್ಟಾರೆಯಾಗಿ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದ ಕೊಹ್ಲಿ, ತಂಡವನ್ನು ಇನ್ನೂ 2 ಓವರ್‌ಗಳು ಬಾಕಿ ಇರುವಂತೆಯೇ ವಿಜಯದ ದಡ ಮುಟ್ಟಿಸಿದರು. ಅಂತಿಮವಾಗಿ ವಿರಾಟ್ ಕೊಹ್ಲಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.



.
.
.
.
.
.
.
.
.
.
.
.
.
.
.
.
.
.
.
.
