
ನವದೆಹಲಿ, ಮೇ.29: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಂಕೋರ್ಟ್ ಮಹತ್ವದ ಸುಧಾರಣೆ ತಂದಿದ್ದು, ತೀರ್ಪುಗಳು ಮತ್ತು ಜಾಮೀನು ಆದೇಶಗಳ ವಿಳಂಬಕ್ಕೆ ಮುಕ್ತಿ ಹಾಡಲು ಎಲ್ಲಾ ಹೈಕೋರ್ಟ್ಗಳಿಗೆ ಕಟ್ಟುನಿಟ್ಟಾದ ಗಡುವನ್ನು ವಿಧಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142 ನೇ ವಿಧಿಯಡಿ ತಮಗಿರುವ ವಿಶೇಷ ಅಧಿಕಾರವನ್ನು ಬಳಸಿ ಆದೇಶಗಳನ್ನು ಹೊರಡಿಸಿದೆ.
ಹೈಕೋರ್ಟ್ಗಳು ಯಾವುದೇ ಪ್ರಕರಣದ ವಾದ-ಪ್ರತಿವಾದ ಆಲಿಸಿ ಆದೇಶವನ್ನು ದಿನಾಂಕದಿAದ ಗರಿಷ್ಠ 3 ತಿಂಗಳ ಒಳಗಾಗಿ ಅಂತಿಮ ತೀರ್ಪನ್ನು ಪ್ರಕಟಿಸಬೇಕು. ವೈಯಕ್ತಿಕ ಸ್ವಾತಂತ್ರ‍್ಯದ ಪ್ರಕರಣಗಳಲ್ಲಿ ತ್ವರಿತ ನಿರ್ಧಾರಗಳು ಅಗತ್ಯ. ಹೀಗಾಗಿ ಜಾಮೀನು ಅರ್ಜಿಗಳ ಆದೇಶಗಳನ್ನು ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಆದೇಶ ಕಾಯ್ದಿರಿಸಿದರೆ, ಮರುದಿನವೇ ಅದನ್ನು ಪ್ರಕಟಿಸಿ, ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು.
ಜಾಮೀನು ಅಥವಾ ಶಿಕ್ಷೆ ಅಮಾನತು ಆದೇಶ ಹೊರಬಿದ್ದ ತಕ್ಷಣ ಆ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತ್ವರಿತವಾಗಿ ತಲುಪಿಸಬೇಕು. ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿ ವಿಚಾರಣಾಧೀನ ಕೈದಿಗಳನ್ನು ಅದೇ ದಿನ ಅಥವಾ ಹೆಚ್ಚೆಂದರೆ ಮರುದಿನವೇ ಜೈಲಿನಿಂದ ಬಿಡುಗಡೆ ಮಾಡಬೇಕು.ಹೈಕೋರ್ಟ್ಗಳು ನೀಡುವ ಎಲ್ಲಾ ತೀರ್ಪುಗಳನ್ನು ಅವು ಪ್ರಕಟವಾದ 24 ಗಂಟೆಗಳ ಒಳಗೆ ಆಯಾ ಹೈಕೋರ್ಟ್ನ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಹೈಕೋರ್ಟ್ಗಳು ಸಾವಿರಾರು ಜನರು ನ್ಯಾಯವನ್ನು ಬಯಸಿ ಬರುವ ಪ್ರಾಥಮಿಕ ಸಂಸ್ಥೆಗಳಾಗಿವೆ. ಇಲ್ಲಿ ಸಮಯಕ್ಕೆ ಸರಿಯಾಗಿ ತೀರ್ಪು ನೀಡುವುದು ಅತ್ಯಗತ್ಯ. ಈ ನಿಯಮಗಳು ಯಾವುದೇ ನ್ಯಾಯಾಧೀಶರು ಅಥವಾ ಸಂಸ್ಥೆಯ ಮೇಲೆ ಆಕ್ಷೇಪ ಹೇರಲು ಅಲ್ಲ, ಬದಲಿಗೆ ನ್ಯಾಯದಾನ ಪ್ರಕ್ರಿಯೆಯನ್ನು ವೇಗಗೊಳಿಸಲು ತರಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.



.
.
.
.
.
.
.
.
.
.
.
.
.
.
.
.
.
.
.
.
