
ಬೆಂಗಳೂರು,ಜೂ.02: ಸಾಮಾನ್ಯವಾಗಿ ಕರಾವಳಿ ಭಾಗಕ್ಕೆ ಮುಂಗಾರು ಮಾರುತಗಳು ಮೇ ಕೊನೆಯ ವಾರದಲ್ಲಿ ಪ್ರವೇಶಿಸುತ್ತವೆ. 2021ರಲ್ಲಿ ಜೂನ್ 3ಕ್ಕೆ ಬಂದರೆ, 2023ರಲ್ಲಿ ಜೂ.8 ಮುಂಗಾರು ಮಳೆ ಬಂದಿತ್ತು. ಈ ಬಾರಿ ಜೂನ್ 4ಕ್ಕೆ ಮುಂಗಾರು ಆಗಮಿಸಲಿದೆ ಎಂದು ಹೇಳಲಾಗಿದ್ದರೂ ಎಲ್ ನಿನೋ ಪರಿಣಾಮದಿಂದಾಗಿ ಮುಂಗಾರು ಮಾರುತಗಳ ಪ್ರವೇಶದಲ್ಲಿ ಬದಲಾವಣೆಗಲಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಮುಂಗಾರು ಮಾರುತ ಕಳೆದ ವರ್ಷಗಳಿಗೆ ಹೋಲಿಸಿದರೆ ಅಷ್ಟೊಂದು ಪ್ರಬಲವಾಗಿರಲ್ಲ. ಕ್ರಮೇಣ ಪ್ರಬಲವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ತಜ್ಞರ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣವಾದ ಚಂಡಮಾರುತೀಯ ವಾತಾವರಣ (ಸೈಕ್ಲೋನ್ ಸಿಸ್ಟಂ) ಮುಂಗಾರು ಮಾರುಗಳ ಚಲನವಲನಕ್ಕೆ ಅಡ್ಡಿಯಾಗಿದೆ. ಸಾಮಾನ್ಯವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಬೀಸುವ ತೇವಾಂಶಯುತ ಗಾಳಿಗಳು ಕೇರಳದ ಮೂಲಕ ಕರ್ನಾಟಕಕ್ಕೆ ಪ್ರವೇಶಿಸುತ್ತವೆ. ಆದರೆ ಈ ಬಾರಿ ಚಂಡಮಾರುತದ ಪರಿಣಾಮದಿಂದ ಗಾಳಿಯ ದಿಕ್ಕು ಮತ್ತು ವೇಗದಲ್ಲಿ ವ್ಯತ್ಯಾಸ ಉಂಟಾಗಿದೆ. ಇದಲ್ಲದೆ, ಎಲ್ನಿನೋ ಪರಿಣಾಮವೂ ಈ ವರ್ಷದ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿದೆ.
1997 ರಲ್ಲಿ ಜಗತ್ತಿನಾದ್ಯಂತ ತಲ್ಲಣ ಮೂಡಿಸಿದ್ದ ಭೀಕರ ‘ಎಲ್ ನಿನೊ’ (El Nino) ಪರಿಣಾಮವನ್ನು ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾದ ‘ಹಿಂದೂ ಮಹಾಸಾಗರದ ದ್ವಿಧ್ರುವಿ’ (IOD) ಎಂಬ ರಕ್ಷಣಾ ಗುರಾಣಿ ಯಶಸ್ವಿಯಾಗಿ ತಡೆದು, ದೇಶದಲ್ಲಿ ಶೇಕಡಾ 2 ರಷ್ಟು ಅಧಿಕ ಮಳೆ ತಂದಿತ್ತು. ಆದರೆ, ಪ್ರಸ್ತುತ 2026 ರ ಸಾಲಿನಲ್ಲಿ ಹಿಂದೂ ಮಹಾಸಾಗರವು ತಟಸ್ಥವಾಗಿರಲಿದ್ದು , ಹವಾಮಾನ ಇಲಾಖೆ ಮತ್ತು ಕೃಷಿ ವಲಯವು ಮುಂಜಾಗ್ರತಾ ಕ್ರಮಗಳೊಂದಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಭತ್ತದ ಬಿತ್ತನೆ, ಅಡಕೆ, ತೆಂಗು ಹಾಗೂ ರಬ್ಬರ್ ತೋಟಗಳ ನಿರ್ವಹಣಾ ಕಾರ್ಯಗಳು ಮಳೆಯ ಮೇಲೆ ಅವಲಂಬಿತವಾಗಿವೆ. ಮುಂಗಾರು ತಡವಾದರೆ ಈ ಎಲ್ಲ ಕೃಷಿ ಸಂಬಂಧಿತ ಕಾರ್ಯಗಳಿಗೆ ಸಮಸ್ಯೆಗಳಾಗಲಿವೆ. ಈಗಾಗಲೇ ಗ್ರಾಮೀಣ ಭಾಗಗಳ ಬಾವಿ ಮತ್ತು ಜಲಮೂಲಗಳಲ್ಲಿ ನೀರಿನ ಮಟ್ಟ ಕುಸಿಯತೊಡಗಿದೆ. ಮಳೆ ಮತ್ತಷ್ಟು ತಡವಾದರೆ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಬಿಸಿಲಿನ ವಾತಾವರಣ ಮೀನುಗಾರಿಗೂ ಸಮಸ್ಯೆಯನ್ನೊಡ್ಡಲಿದೆ. ಜತೆಗೆ ಜನರಲ್ಲೂಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.



.
.
.
.
.
.
.
.
.
.
.
.
.
.
.
.
.
.
.
.
