
ಕಾರ್ಕಳ, ಜೂ.03: ಶಾಲೆಯ ಆವರಣದೊಳಗೆ ಕಸಕ್ಕೆ ಬೆಂಕಿ ಹಾಕುತ್ತಿದ್ದ ವೇಳೆ ಏಕಾಎಕಿ ನಿಗೂಢ ಸ್ಪೋಟದಿಂದ ಐವರು ವಿದ್ಯಾರ್ಥಿಗಳಿಗೆ ಸುಟ್ಟಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಶಾಲೆ ಆರಂಭಕ್ಕೆ ಮುನ್ನ ಸ್ವಚ್ಚತಾ ಕಾರ್ಯ ನಡೆದಿದ್ದು, ಸಂಗ್ರಹಿಸಿದ ಕಸವನ್ನು ವಿದ್ಯಾರ್ಥಿಗಳು ಒಂದೆಡೆ ಸುರಿದು ಬೆಂಕಿ ಹಚ್ಚುವ ವೇಳೆ ಕಸದ ರಾಶಿಯಲ್ಲಿ ಏಕಾಎಕಿ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಪಕ್ಕದಲ್ಲಿದ್ದ ಐವರು ವಿದ್ಯಾರ್ಥಿಗಳಿಗೆ ಬೆಂಕಿ ತಗುಲಿದೆ. 7 ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸೇರಿ 5 ವಿದ್ಯಾರ್ಥಿಗಳಿಗೆ ಸುಟ್ಟ ಗಾಯಗಳಾಗಿದ್ದು,ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೂವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದ ಸುಟ್ಟಗಾಯಗಳಾಗಿದ್ದರೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶಾಲಾ ಮುಖ್ಯೋಪಾಧ್ಯಾಯ ದಯಾನಂದ ನಾಯಕ್ ಅವರು ಶಾಲಾ ತರಗತಿ ಕೊಠಡಿಗಳ
ಸ್ವಚ್ಚತಾ ಕಾರ್ಯವನ್ನು ವಿದ್ಯಾರ್ಥಿಗಳಿಂದ ಮಾಡಿಸಿದ್ದರು ಎನ್ನುವ ಆರೋಪ ಕೇಳಿಬಂದಿದ್ದು,ಸಂಗ್ರಹವಾದ ಕಸದಲ್ಲಿ ಜಿರಳೆಗಳಿಗೆ ಸಿಂಪಡಿಸುವ ಹಿಟ್ ಎನ್ನುವ ಕೆಮಿಕಲ್ ಟಿನ್ ಸೇರಿಕೊಂಡಿದ್ದು, ಕಸಕ್ಕೆ ಹಾಕಿದ್ದ ಬೆಂಕಿ ಟಿನ್ ಗೆ ತಗುಲಿ ಅದು ಸ್ಪೋಟವಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ದಯಾನಂದ ನಾಯಕ್ ಅವರ ಸೂಚನೆ ಮೇರೆಗೆ ವಿದ್ಯಾರ್ಥಿಗಳು ಕಸಕ್ಕೆ ಬೆಂಕಿ ಹಚ್ಚಿದ್ದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಾಲೆ ಆರಂಭಗೊಂಡ ಕೇವಲ ಎರಡೇ ದಿನಗಳಲ್ಲಿ ಇಂತಹ ದುರಂತ ಸಂಭವಿಸಿದ್ದು, ಮುಖ್ಯೋಪಾಧ್ಯಾಯರ ಕರ್ತವ್ಯಲೋಪದಿಂದ ಈ ದುರ್ಘಟನೆ ಸಂಭವಿಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗೆ ಬೆಂಕಿ ದುರಂತದ ಮಾಹಿತಿಯೇ ಇಲ್ಲ!
ಬುಧವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ದುರಂತದಲ್ಲಿ ವಿದ್ಯಾರ್ಥಿಗಳು ಗಾಯಗೊಂಡ ದುರ್ಘಟನೆ ಕುರಿತು ಸಂಜೆಯಾದರೂ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಅವರಿಗೆ ಮಾಹಿತಿಯೇ ಇಲ್ಲ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಮುಚ್ಚಿ ಹಾಕಲು ಶಾಲಾ ಅಧ್ಯಾಪಕ ವೃಂದವು ಪ್ರಯತ್ನಿಸಿರುವ ಕುರಿತು ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಕರಾವಳಿ ನ್ಯೂಸ್ ವರದಿಗಾರ ಬಿಇಒ ಗಿರಿಜಮ್ಮ ಅವರನ್ನು ಸಂಪರ್ಕಿಸಿದಾಗ ಈ ಘಟನೆ ಕುರಿತು ನನಗೆ ಸ್ಪಷ್ಟ ಮಾಹಿತಿ ಇಲ್ಲ ಎನ್ನುವ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಈ ದುರ್ಘಟನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿದಾಗ ಘಟನೆ ಕುರಿತು ಮಾಹಿತಿ ಪಡೆಯುವುದಾಗಿ ಹೇಳಿದ್ದಾರೆ.ಅಲ್ಲದೇ ಘಟನೆ ಕುರಿತು ಪತ್ರಕರ್ತರ ಪ್ರಶ್ನೆಗೆ ಮಾಹಿತಿ ಇಲ್ಲವೆಂದ ಬಿಇಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಇಂತಹ ದುರ್ಘಟನೆ ಸಂಭವಿಸಿದ ಕುರಿತು ಪೋಷಕರು ಆತಂಕಗೊಂಡಿದ್ದು, ಗಾಯಾಳು ವಿದ್ಯಾರ್ಥಿಗಳ ಹೆತ್ತವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮಕ್ಕಳ ಕೈಯಲ್ಲಿ ಸ್ವಚ್ಚತೆ ಮಾಡಿಸಿ ಕಸ ವಿಲೇವಾರಿ ಮಾಡಿಸಿದ ಶಾಲಾ ಮುಖ್ಯೋಪಾಧ್ಯಾಯರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


.
.
.
.
.
.
.
.
.
.
.
.
.
.
.
.
.
.
.
.
