
ಬೆಂಗಳೂರು,ಜೂ.05: ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಕ್ತಾಯಗೊಂಡು 4 ತಿಂಗಳು ಕಳೆದಿದ್ದು, ಶೀಘ್ರವೇ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಪೂರ್ವಸಿದ್ಧತೆಗೆ ಮುಂದಾಗಿದೆ. ಈ ಕುರಿತು ವಾರ್ಡ್ಗಳ ವಿಂಗಡಣೆ ಹಾಗೂ ವಿವಿಧ ವರ್ಗಗಳ ಸದಸ್ಯ ಸ್ಥಾನಗಳ ಮೀಸಲಾತಿ ನಿಗದಿಪಡಿಸುವ ಕುರಿತು ಸರ್ಕಾರ ಮಹತ್ವದ ಅಧಿಕೃತ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 5 ರ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಈ ಪ್ರಕ್ರಿಯೆಯನ್ನು ಕೈಗೊಳ್ಳಲು ಸ್ಪಷ್ಟ ಸೂತ್ರಗಳನ್ನು ನಿಗದಿಪಡಿಸಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ ಬರುವ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳನ್ನು ಒಂದು ವಾರ್ಡ್ ಎಂದು ಪರಿಗಣಿಸಿ ಸೀಮಾ ಗಡಿಗಳನ್ನು ಗುರುತಿಸಬೇಕು. ವಾರ್ಡ್ಗಳ ವ್ಯಾಪ್ತಿಯ ಜನಸಂಖ್ಯೆಯನ್ನು ನಿರ್ಧರಿಸಲು 2011ರ ಅಧಿಕೃತ ಜನಗಣತಿಯ ಅಂಕಿ-ಅAಶಗಳನ್ನು ಮಾತ್ರ ಆಧಾರವಾಗಿಟ್ಟುಕೊಳ್ಳಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇನ್ನುಮುಂದೆ ವಿಧಾನಸಭಾ ಮತಗಟ್ಟೆಗಳೇ ಪಂಚಾಯಿತಿ ವಾರ್ಡ್ಗಳಾಗಿ ಪರಿವರ್ತನೆಗೊಳ್ಳಲಿದೆ. ಪ್ರತಿ ವಾರ್ಡ್ನಲ್ಲಿ ಆಯ್ಕೆಯಾಗಬೇಕಾದ ಸದಸ್ಯರ ಸಂಖ್ಯೆಯನ್ನು ಲೆಕ್ಕಹಾಕಲು ನಿರ್ದಿಷ್ಟ ಗಣಿತ ಸೂತ್ರವನ್ನು ನೀಡಲಾಗಿದೆ. ವಾರ್ಡಿನ ಜನಸಂಖ್ಯೆಯನ್ನು ಒಟ್ಟು ಪಂಚಾಯಿತಿ ಜನಸಂಖ್ಯೆಯಿAದ ಭಾಗಿಸಿ, ಅದಕ್ಕೆ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆಯಿAದ ಗುಣಿಸಬೇಕಾಗುತ್ತದೆ. ಲೆಕ್ಕಾಚಾರದ ಅವಧಿಯಲ್ಲಿ ದಶಮಾಂಶ ಪರಿಗಣನೆಗೆ ವಿಶೇಷ ನಿಯಮವಿದ್ದು, ದಶಮಾಂಶವು 0.50 ಅಥವಾ ಅದಕ್ಕಿಂತ ಹೆಚ್ಚಿದ್ದರೆ (=0.5) ಮುಂದಿನ ಪೂರ್ಣ ಸಂಖ್ಯೆಯನ್ನು (ಉದಾಹರಣೆಗೆ 3.51 ಬಂದರೆ 4 ಸ್ಥಾನ) ನೀಡಬೇಕು.ದಶಮಾಂಶವು 0.50 ಕ್ಕಿಂತ ಕಡಿಮೆ ಇದ್ದರೆ (-0.5) ಹಿಂದಿನ ಸಂಖ್ಯೆಯನ್ನು (ಉದಾಹರಣೆಗೆ 3.49 ಬಂದರೆ 3 ಸ್ಥಾನ) ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಅಧಿಸೂಚಿಸಿರುವ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ವ್ಯತ್ಯಾಸವಾಗುವಂತಿಲ್ಲ.
ಕರ್ನಾಟಕ ಪಂಚಾಯತ್ ರಾಜ್ ನಿಯಮಗಳು 1998 ರ ಪ್ರಕಾರ ಸರದಿ ವ್ಯವಸ್ಥೆಯನ್ನು ಅನುಸರಿಸಿ ಮೀಸಲಾತಿ ಹಂಚಿಕೆ ಮಾಡಬೇಕು. ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಪಂಚಾಯಿತಿ ವ್ಯಾಪ್ತಿಯ ಒಟ್ಟು ಜನಸಂಖ್ಯೆಯಲ್ಲಿ ಇವರ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಸ್ಥಾನಗಳನ್ನು ಮೀಸಲಿಡಬೇಕು. ಒಂದು ವೇಳೆ ಲೆಕ್ಕಾಚಾರದಲ್ಲಿ ಯಾವುದೇ ಸ್ಥಾನ ಸಿಗದಿದ್ದರೂ, ಕನಿಷ್ಠ ಒಂದು ಸ್ಥಾನವನ್ನು ಕಡ್ಡಾಯವಾಗಿ ಮೀಸಲಿರಿಸಬೇಕು. ಒಟ್ಟು ಸ್ಥಾನಗಳ ಪೈಕಿ ಸರಿಸುಮಾರು ಮೂರನೇ ಒಂದರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು. ಇದರಲ್ಲಿ ಶೇಕಡಾ 80 ರಷ್ಟು ಸ್ಥಾನಗಳನ್ನು ಹಿಂದುಳಿದ ಪ್ರವರ್ಗ ‘ಅ’ (2ಎ) ಕ್ಕೆ ಹಾಗೂ ಇನ್ನುಳಿದ ಶೇಕಡಾ 20 ರಷ್ಟು ಸ್ಥಾನಗಳನ್ನು ಹಿಂದುಳಿದ ಪ್ರವರ್ಗ ‘ಬಿ’ (2ಬಿ) ಕ್ಕೆ ಹಂಚಿಕೆ ಮಾಡಬೇಕು.
ಎಸ್.ಸಿ, ಎಸ್.ಟಿ ಮತ್ತು ಹಿಂದುಳಿದ ವರ್ಗಗಳ ಒಟ್ಟು ಮೀಸಲಾತಿಯು ಯಾವುದೇ ಕಾರಣಕ್ಕೂ ಆ ಪಂಚಾಯಿತಿಯ ಒಟ್ಟು ಸ್ಥಾನಗಳ ಶೇ. 50 ಕ್ಕಿಂದ ಹೆಚ್ಚಾಗುವಂತಿಲ್ಲ. ಒಂದು ವೇಳೆ ಶೇ. 50 ಮೀರುವ ಸಂದರ್ಭ ಎದುರಾದರೆ, ಎಸ್.ಸಿ, ಎಸ್.ಟಿ ಸ್ಥಾನಗಳನ್ನು ಕಡಿತಗೊಳಿಸದೇ, ಹಿಂದುಳಿದ ವರ್ಗದ ಸ್ಥಾನಗಳನ್ನು ಕಡಿತಗೊಳಿಸಿ ಶೇ. 50 ರ ಮಿತಿಗೆ ಸೀಮಿತಗೊಳಿಸಬೇಕು.
ಪ್ರತಿಯೊಂದು ವರ್ಗದಲ್ಲೂ ಮಹಿಳೆಯರಿಗೆ ಕನಿಷ್ಠ ಶೇಕಡಾ 50 ರಷ್ಟು ಸ್ಥಾನಗಳನ್ನು ಮೀಸಲಿಡಬೇಕು. ಲೆಕ್ಕಾಚಾರದಲ್ಲಿ ಮಹಿಳಾ ಸ್ಥಾನಗಳ ಅಪೂರ್ಣಾಂಶ ಎಷ್ಟೇ ಬಂದರೂ ಅದನ್ನು ಒಂದು ಪೂರ್ಣ ಸ್ಥಾನವೆಂದೇ ಪರಿಗಣಿಸಬೇಕು (ಉದಾಹರಣೆಗೆ 3 ಸ್ಥಾನಗಳಿದ್ದರೆ 2 ಮಹಿಳಾ ಸ್ಥಾನ ನೀಡಬೇಕು).ಒಂದು ವೇಳೆ ಪ್ರತಿಯೊಂದು ವರ್ಗದಲ್ಲೂ ಶೇ. 50 ಕ್ಕಿಂತ ಕಡಿಮೆ ಇಲ್ಲದಂತೆ ಹಂಚಿಕೆ ಮಾಡಿದಾಗ, ಇಡೀ ಗ್ರಾಮ ಪಂಚಾಯಿತಿಯ ಒಟ್ಟು ಮಹಿಳಾ ಸ್ಥಾನಗಳು ಒಟ್ಟು ಸ್ಥಾನಗಳ ಅರ್ಧಕ್ಕಿಂತ (50%) ಹೆಚ್ಚಾದರೆ, ಅಂತಹ ಹೆಚ್ಚುವರಿ ಮಹಿಳಾ ಸ್ಥಾನವನ್ನು ‘ಸಾಮಾನ್ಯ ವರ್ಗದ ಮಹಿಳೆ’ಗೆ ನಿಗದಿಪಡಿಸಿರುವ ಸ್ಥಾನದಲ್ಲಿ ಕಡಿತಗೊಳಿಸಿ, ಅದನ್ನು ‘ಸಾಮಾನ್ಯ ಮುಕ್ತ’ ಸ್ಥಾನಕ್ಕೆ ವರ್ಗಾಯಿಸಬೇಕು. ಸುತ್ತೋಲೆಯಲ್ಲಿ ಎಕ್ಸ್, ವೈ ಮತ್ತು ಜೆಡ್ ಎಂಬ ಮಾದರಿ ಉದಾಹರಣೆಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಈ ಗೊಂದಲ ನಿವಾರಣೆ ಮಾಡಲಾಗಿದೆ.
ಸಾರ್ವಜನಿಕರ ಅಹವಾಲು ಮತ್ತು ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳು, ಅಂತಿಮ ಅಧಿಸೂಚನೆಗೆ 30 ದಿನಗಳ ಗಡುವು!
ಜಿಲ್ಲಾಧಿಕಾರಿಗಳು ಮೊದಲು ವಾರ್ಡುವಾರು ಜನಸಂಖ್ಯೆ ಮತ್ತು ಸದಸ್ಯ ಸ್ಥಾನಗಳ ಹಂಚಿಕೆಯ ಕರಡು ಅಧಿಸೂಚನೆಯನ್ನು ಹೊರಡಿಸಿ, ಸಾರ್ವಜನಿಕರ ಅಹವಾಲು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲು 15 ದಿನಗಳ ಕಾಲಾವಕಾಶ ನೀಡಬೇಕು. ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ವಿಚಾರಣೆ ನಡೆಸಿದ ನಂತರ, ಮುಂದಿನ 30 ದಿನಗಳ ಒಳಗಾಗಿ ಕಡ್ಡಾಯವಾಗಿ ಕೋಷ್ಠಕ-1 ಮತ್ತು ಕೋಷ್ಠಕ-2 ರ ನಮೂನೆಯಲ್ಲಿ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕು. ಪ್ರಕಟಿತ ಪ್ರತಿಯನ್ನು ಸರ್ಕಾರಕ್ಕೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ. ಮತದಾರರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾದೇಶಿಕ ಚುನಾವಣಾ ಕ್ಷೇತ್ರ ಮತ್ತು ವರ್ಗವಾರು ಮೀಸಲಾತಿ ವಿವರಗಳನ್ನು ಪ್ರದರ್ಶಿಸಲು ನಿರ್ದಿಷ್ಟ ಮಾದರಿ ಕೋಷ್ಠಕಗಳನ್ನು ಲಗತ್ತಿಸಲಾಗಿದ್ದು, ಅದರಂತೆಯೇ ಅಧಿಸೂಚನೆ ಹೊರಡಿಸಲು ವಿಶೇಷ ಸೂಚನೆ ನೀಡಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
