
ನವದೆಹಲಿ,ಜೂ.13: ಸ್ವಂತ ಮನೆ ಇಲ್ಲದ ಬಡ ಜನರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅವಧಿಯನ್ನು 2029 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ. ಈ ಯೋಜನೆಯಡಿ ದೇಶದಲ್ಲಿ ಸ್ವಂತ ಮನೆ ಇಲ್ಲದ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ.
ಇದರೊಂದಿಗೆ ರಾಜ್ಯ ಸರ್ಕಾರಗಳು ಕೂಡ ಬಡವರ ಮನೆ ನಿರ್ಮಾಣಕ್ಕೆ ತನ್ನ ಪಾಲಿನ ಸಹಾಯಧನವನ್ನು ನೀಡಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಈ ಸಹಾಯವನ್ನು ಬಳಸಿಕೊಂಡು ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ತಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಬಹುದು.
ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಸ್ವಂತ ಮನೆ ಹೊಂದಿರಬಾರದು.
ಕಡ್ಡಾಯವಾಗಿ ಪಡಿತರ ಚೀಟಿ (Ration Card) ಹೊಂದಿರಬೇಕು.ಅರ್ಜಿದಾರರು ಕಡಿಮೆ ಆದಾಯದ ವರ್ಗಕ್ಕೆ (LIG/EWS) ಸೇರಿದವರಾಗಿರಬೇಕು. ಆಧಾರ್ ಕಾರ್ಡ್, ಪಡಿತರ ಚೀಟಿ, ಪ್ಯಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ವಿಳಾಸದ ಪುರಾವೆ ಮತ್ತು ಆದಾಯ ಪ್ರಮಾಣ ಪತ್ರ ದಾಖಲೆಗಳನ್ನು ಒದಗಿಸಬೇಕು.
ಅರ್ಜಿ ಸಲ್ಲಿಸಲು ಮೊದಲಿಗೆ ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ.ಹೋಮ್ ಪೇಜ್ನಲ್ಲಿರುವ ‘Citizen Assessment’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ‘Apply Online’ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.
ಬಳಿಕ ‘Check’ ಅಥವಾ ‘Verify’ ಆಪ್ಷನ್ ಕ್ಲಿಕ್ ಮಾಡಿ.
ನಂತರ ಪರದೆಯ ಮೇಲೆ ಅರ್ಜಿ ನಮೂನೆ (Application Form) ತೆರೆದುಕೊಳ್ಳುತ್ತದೆ.
ಅದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಕುಟುಂಬದ ಮುಖ್ಯಸ್ಥರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಾರ್ಷಿಕ ಆದಾಯ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಕೊನೆಯಲ್ಲಿ ಕಾಣಿಸುವ ಕ್ಯಾಪ್ಚಾ ಕೋಡ್ (Captcha Code) ನಮೂದಿಸಿ. ಎಲ್ಲಾ ವಿವರಗಳನ್ನು ಪರಿಶೀಲಿಸಿ ‘Submit’ ಬಟನ್ ಒತ್ತಿ.
ಅರ್ಜಿ ಸಲ್ಲಿಕೆಯಾದ ನಂತರ ಪರದೆಯ ಮೇಲೆ ‘ಅಪ್ಲಿಕೇಶನ್ ನಂಬರ್’ (Application Number) ಕಾಣಿಸಿಕೊಳ್ಳುತ್ತದೆ. ನಿಮ್ಮ ಅರ್ಜಿಯ ಸ್ಥಿತಿಯನ್ನು (Status) ಪರಿಶೀಲಿಸಲು ಈ ನಂಬರ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ.
ನೀವು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಆ ವಿವರಗಳು ಸರ್ಕಾರಿ ಅಧಿಕಾರಿಗಳ ಪರಿಶೀಲನೆಗೆ ಹೋಗುತ್ತವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ದೃಢೀಕರಿಸುತ್ತಾರೆ. ನೀವು ಯೋಜನೆಗೆ ಅರ್ಹರೆಂದು ಕಂಡುಬಂದಲ್ಲಿ, ನಿಮ್ಮ ಹೆಸರನ್ನು ‘ಪಿಎಂ ಆವಾಸ್ ಯೋಜನೆ’ಯ ಫಲಾನುಭವಿಗಳ ಪಟ್ಟಿಗೆ ಸೇರಿಸಲಾಗುತ್ತದೆ.
ಬಳಿಕ ಹಂತ-ಹಂತವಾಗಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕೆಲವು ರಾಜ್ಯ ಸರ್ಕಾರಗಳು ಈ ಪಿಎಂ ಆವಾಸ್ ಯೋಜನೆಯನ್ನು ತಮ್ಮ ರಾಜ್ಯದ ವಸತಿ ಯೋಜನೆಗಳೊಂದಿಗೆ ಜೋಡಿಸಿ, ಕೇಂದ್ರದ ಹಣದ ಜತೆಗೆ ಹೆಚ್ಚುವರಿ ಸಹಾಯಧನವನ್ನು ಸಹ ಬಡವರಿಗೆ ನೀಡುತ್ತಿವೆ.


.
.
.
.
.
.
.
.
.
.
.
.
.
.
.
.
.
.
.
.
